ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದ ರಾಜಕೀಯಯಕ್ಕೆ ತಿರುಗಿದೆ. ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಬಿಜೆಪಿ ಸಾಥ್ ನೀಡಿದ್ದು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ಬಾಣಗಳ ಸುರಿಮಳೆ ಜೋರಾಗಿದೆ. ಕನಕಪುರ ಡಿಕೆಶಿಗೆ ಸಂಬಂಧಿಸಿದ್ದಲ್ಲ, ಡಿಕೆಶಿ ಕನಕಪುರ ಎಂಎಲ್‍ಎ ಅಷ್ಟೇ ಅಂತಾ ಕಂದಾಯ ಸಚಿವ ಆರ್.ಅಶೋಕ್ ಗುಡುಗಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದಲ್ಲಿ ಮಾತನಾಡಿದ ಆರ್.ಅಶೋಕ್, ಗಲಾಟೆ ಮಾಡಬೇಡಿ ಅಂತಾ ಡಿಕೆಶಿ ಅವರ ಕಾರ್ಯಕರ್ತರಿಗೆ ಹೇಳಿದ್ರೆ ಗಲಾಟೆ ಮಾಡಿ ಅಂತಾ ಅರ್ಥ. ನಮ್ಮ ಸರ್ಕಾರ ಗಲಾಟೆ ಮಾಡಿಸಲ್ಲ, ಗಲಾಟೆ ಮಾಡಿಸಲು ಡಿಕೆಶಿಯಿಂದ ಸಾಧ್ಯ ಅಂತಾ ಟಾಂಗ್ ಕೊಟ್ಟರು.
Advertisement
ಶಿವಕುಮಾರ್ ಪ್ರಚೋದಿಸುವ ಹೇಳಿಕೆ ಕೊಡಬಾರದು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ಸ್ವಾಮೀಜಿ ರಾಮನಗರ ಜಿಲ್ಲೆಯವರು. ಶಿವಕುಮಾರ್ ಅವರಿಗೆ ಇವರು ಯಾರೂ ನೆನಪಾಗಿಲ್ವಾ? ಮೊದಲು ಹೆತ್ತ ತಾಯಿಯನ್ನು ಪೂಜಿಸೋಣ, ನಂತರ ಪಕ್ಕದ ಮನೆ ತಾಯಿಯನ್ನು ಪೂಜಿಸೋಣ ಎಂದರು.
Advertisement
Advertisement
ಇನ್ನು ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಡಿಸಿ ಮೌಖಿಕ ವರದಿ ನೀಡಿದ್ದು, ಸಮಗ್ರವಾಗಿ ಲಿಖಿತ ವರದಿ ನೀಡುವಂತೆ ಸೂಚಿಸಿರುವುದಾಗಿ ಅಶೋಕ್ ಸ್ಪಷ್ಟಪಡಿಸಿದ್ದಾರೆ. ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಡಿಸೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದಿದ್ದಾರೆ. ಆದರೆ ಎರಡು ವರ್ಷಗಳಿಂದ ಕೆಲಸ ನಡೆಯುತ್ತಿದೆ. ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕಕ್ಕೆ ಅನುಮತಿಯನ್ನೇ ಪಡೆದಿಲ್ಲ ಅನ್ನೋದು ಆರ್. ಅಶೋಕ್ ವಾದ. ಹಾಗಾಗಿ ಸರ್ಕಾರ ಕಾನೂನಾತ್ಮಕವಾಗಿ ಹೋಗುತ್ತಿದೆ ಅಷ್ಟೇ. ಸಮಯಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.