ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಅವರೇ ಈ ಸ್ಟಿಂಗ್ ಆಪರೇಷನ್ನ(Sting Operation) ಮಹಾನಾಯಕರು, ಅವರೇ ನೇರವಾಗಿ ಇದರಲ್ಲಿ ಭಾಗಿಯಾಗಿರುವುದರಿಂದಲೇ ಸರ್ಕಾರ ಪ್ರಕರಣವನ್ನು ತನಿಖೆಗೆ ಒಪ್ಪಿಸುತ್ತಿಲ್ಲ ಎಂದು ಕೆಂದ್ರ ಸಚಿವ ಕುಮಾರಸ್ವಾಮಿ(HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ಗೆ ಕಾಲವೇ ಉತ್ತರ ನೀಡಲಿದೆ’ ಎಂಬ ಮುಖ್ಯಮಂತ್ರಿಗಳ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡ ಅವರು “ತನಿಖೆ ನಡೆಸಲು ಸಮಯ ಯಾವಾಗ ಬರುತ್ತದೆ? ಮೇಲಿಂದ ಹಾಗೇ ಕಾಲ ಧರೆಗಿಳಿಯುತ್ತದೆಯೇ? ಕೆಲಸಕ್ಕೆ ಬಾರದ ವಿಷಯಗಳಿಗೆಲ್ಲ ತನಿಖೆ ನಡೆಸುವ ಸರ್ಕಾರ, ಇಷ್ಟು ದೊಡ್ಡ ಹಗರಣವನ್ನು ತನಿಖೆ ಮಾಡದೆ ಮುಚ್ಚಿಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಉತ್ತರ ಭಾರತದಿಂದ ಬಂದು ಸ್ಟಿಂಗ್ ಮಾಡಿದ್ದಾರೆ, ಕೇಂದ್ರ ಸಚಿವರು ಮತ್ತು ಬಿಜೆಪಿಯ ಇಬ್ಬರು ನಾಯಕರ ಕೈವಾಡವಿದೆ ಎಂದು ನೀವೇ ಮಾಧ್ಯಮಗಳಿಗೆ ಸುದ್ದಿ ಸೋರಿಕೆ ಮಾಡಿ ಪ್ರಚಾರ ಮಾಡಿದ್ದೀರಿ. ಈಗ ಯಾಕೆ ಮೌನವಾಗಿದ್ದೀರಿಎಂದು ಆಕ್ರೋಶ ಹೊರಹಾಕಿದರು.
ನನ್ನ ಪೆನ್ ಡ್ರೈವ್ ಒರಿಜಿನಲ್ ಆಗಿತ್ತು, ಆದರೆ ಇವರು ನಕಲಿ ಸೃಷ್ಟಿಸುವವರು. ನಾನು ಪೆನ್ ಡ್ರೈವ್, ಸ್ಟಿಂಗ್ ಆಪರೇಷನ್ ಎಂದ ತಕ್ಷಣ ಇವರಿಗೆ ನಡುಕ ಶುರುವಾಗಿದೆ ಎಂದು ಲೇವಡಿ ಮಾಡಿದರು.
ಸಚಿವರನ್ನು ನಿಯಂತ್ರಿಸಲು ಸ್ಟಿಂಗ್
ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರನ್ನು ಹತೋಟಿಯಲ್ಲಿಡಲು ಈ ಸ್ಟಿಂಗ್ ಅಸ್ತ್ರವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ ಹೆಚ್ಡಿಕೆ, ಕ್ಯಾಬಿನೆಟ್ ಸಭೆಗೆ ಸ್ಟಿಂಗ್ ಆಪರೇಷನ್ ಫೈಲ್ ಹಾಗೂ ಮಾಹಿತಿಯನ್ನು ಸಿಎಂ ಅವರೇ ತೆಗೆದುಕೊಂಡು ಹೋಗಿ ಚರ್ಚಿಸಿದ್ದಾರೆ. ಸಚಿವರನ್ನು ಕಂಟ್ರೋಲ್ ಮಾಡುವುದೇ ಇದರ ಹಿಂದಿನ ಉದ್ದೇಶ. ಇದರಲ್ಲಿ ಸತ್ಯಾಸತ್ಯತೆ ಹೊರಬರಲೇಬೇಕು, ಇದನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿಗಳ ಮೈಸೂರು ಅರಮನೆ ಫೋಟೋ ಶೂಟ್ ಕುರಿತು ವ್ಯಂಗ್ಯವಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಇಷ್ಟೆಲ್ಲಾ ಗಂಭೀರ ವಿಚಾರಗಳು ನಡೆಯುತ್ತಿರುವಾಗ ಸಿಎಂ ಮೈಸೂರು ಅರಮನೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಕಾಲ ಕಳೆಯುತ್ತಿದ್ದಾರೆ. ಅರಮನೆಯಲ್ಲಿ ಇನ್ನು ಸ್ವಲ್ಪ ಹಿಂದೆ ಹೋಗಿ ಸಿಂಹಾಸನ ಹಾಕಿಕೊಂಡು ಕುಳಿತಿದ್ದರೆ ಸರಿಹೋಗುತ್ತಿತ್ತು. ‘ಅತಿ ವಿನಯಂ ಧೂರ್ತ ಲಕ್ಷಣಂ’ ಎನ್ನುವಂತೆ ಹೊಸ ಸಂಸ್ಕೃತಿ ಹುಟ್ಟುಹಾಕಲು ಸಿಎಂ ಮುಂದಾಗಿದ್ದಾರೆ ಎಂದು ಟೀಕಿಸಿದರು.

