ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ದೋಸ್ತಿ ಸರ್ಕಾರವನ್ನು ಬೀಳಿಸಿದ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸಲು ಕಾಂಗ್ರೆಸ್ ಪಾಳೆಯದಲ್ಲಿ ಇನ್ನಿಲ್ಲದ ತಂತ್ರ ನಡೆದಿದೆ. ಇದೀಗ ಕನಕಪುರದ ಬಂಡೆ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಮಾಸ್ಟರ್ ಪ್ಲ್ಯಾನ್‍ವೊಂದನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗೋಕಾಕ್ ಮತಕ್ಷೇತ್ರದಲ್ಲಿ ಬಹುತೇಕ ಲಿಂಗಾಯತ ಸಮುದಾಯ ಪ್ರಬಲರಾಗಿದ್ದು, ಅವರ ಮತಗಳನ್ನು ಒಂದೆಡೆ ಸೇರಿಸಿ ಮುಸ್ಲಿಂ ಮತಗಳು ಕಾಂಗ್ರೆಸ್ ಬಿಟ್ಟು ಬೇರೆಡೆ ಹೋಗದಂತೆ ನೋಡಿಕೊಂಡರೆ ಗೋಕಾಕ್ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಅರಳಿಸಲು ಸಿದ್ಧತೆ ನಡೆಯುತ್ತಿದೆ.
ಡಿಕೆಶಿ ಯುವಕನೊಬ್ಬನನ್ನು ರಮೇಶ್ ಜಾರಕಿಹೊಳಿ ವಿರುದ್ಧ ಕಣಕ್ಕಿಳಿಸಲು ತಂತ್ರ ರೂಪಿಸಿದ್ದು, ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ನಡೆದಿದೆ. ಯುವ ಕಾಂಗ್ರೆಸ್ ಮುಖಂಡ ಬಾಲಾಜಿ ಸಾವಳಗಿ ಅವರಿಗೆ ಕ್ಷೇತ್ರದಲ್ಲಿ ಚುನಾವಣಾಕಾರ್ಯ ಆರಂಭಿಸುವಂತೆ ಡಿಕೆಶಿ ಹಸಿರು ನಿಷಾನೆ ತೋರಿಸಿದ್ದಾರಂತೆ. ಹೈಕಮಾಂಡ್ ಮಟ್ಟದಲ್ಲಿ ಈ ವಿಚಾರವನ್ನು ತಿಳಿಸಿದ್ದು, ಇದಕ್ಕೆ ಕೈ ಹೈಕಮಾಂಡ್ ಕೂಡ ಒಪ್ಪಿಗೆ ಸೂಚಿಸಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಮೂಲಕ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಕೈ ಹಾಕಿ ಜಾರಕಿಹೊಳಿ ಕುಟುಂಬದ ವಿರೋಧಿಯಾಗಿದ್ದ ಡಿ.ಕೆ ಶಿವಕುಮಾರ್ ಈಗ ನೇರವಾಗಿಯೇ ಅಖಾಡಕ್ಕಿಳಿಯಲಿದ್ದಾರೆ.
ಕುಟುಂಬ ರಾಜಕೀಯಕ್ಕೆ ಅಂತ್ಯ:
ಗೋಕಾಕ್ ತಾಲೂಕಿನಾದ್ಯಂತ ಕೇವಲ ಜಾರಕಿಹೊಳಿ ಕುಟುಂಬದವರು ಮಾತ್ರ ಬೇರೆ ಬೇರೆ ಪಕ್ಷಗಳಿಂದ ಚುನಾವಣೆ ನಿಲ್ಲುವ ಪರಿಪಾಠವನ್ನು ಈ ಬಾರಿ ತಪ್ಪಿಸಲಿದ್ದಾರಂತೆ. ಕ್ಷೇತ್ರದಲ್ಲಿ ಪ್ರಬಲವಾಗಿರುವ ಜಾರಕಿಹೊಳಿ ಕುಟುಂಬವನ್ನು ಬಗ್ಗು ಬಡಿಯಲು ಬೆಂಗಳೂರಿನಲ್ಲಿ ಬ್ಲೂಪ್ರಿಂಟ್ ಸಿದ್ಧವಾಗಿದೆಯಂತೆ. ಆಪ್ತ ಬಾಲಾಜಿ ಸಾವಳಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಿ ರಮೇಶ್ ವಿರುದ್ಧ ಸೆಡ್ಡು ಹೊಡೆಯಲು ಕಣ ಸಿದ್ಧಗೊಂಡಿದೆ. ಈ ಮೂಲಕ ಡಿಕೆಶಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಹೊರಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕ ಸತೀಶ್ ಜಾರಕಿಹೊಳಿ ತಮ್ಮ ಲಖನ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿ ರಮೇಶ್ ಜಾರಕಿಹೊಳಿ ಅವರನ್ನು ಬೈ ಎಲೆಕ್ಷನ್‌ನಲ್ಲಿ ಸೋಲಿಸಬೇಕೆಂದು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಆದರೆ ಲಖನ್ ಜಾರಕಿಹೊಳಿ ಅವರ ಟಿಕೆಟ್ ತಪ್ಪಿಸಲು ಡಿಕೆಶಿ ತೆರೆ ಮರೆಯಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೈಕಮಾಂಡ್ ಯಾರಿಗೆ ಅಸ್ತು ಎನ್ನುತ್ತದೆ, ಈ ಗೇಮಿನಲ್ಲಿ ಯಾರಿಗೆ ಸೋಲು ಯಾರಿಗೆ ಗೆಲವು ಎಂಬುದನ್ನು ಕಾದು ನೋಡಬೇಕಾಗಿದೆ.
ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತೆರೆಮರೆಯಲ್ಲಿ ಕೆಲಸ ಆರಂಭಿಸಿದ್ದಾರೆ. ಡಿಕೆಶಿ ಪ್ಲ್ಯಾನ್ ಅನುಷ್ಠಾನಕ್ಕೆ ತರಲು ಲಕ್ಷ್ಮಿ ಗೋಕಾಕ್ ಕ್ಷೇತ್ರದ ಉಸ್ತುವಾರಿಯಲ್ಲಿ ತಮ್ಮ ಹೆಸರು ನಮೂದಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಮಾಜಿ ಸತೀಶ್ ಜಾರಕಿಹೊಳಿ ಅವರನ್ನು ಗೋಕಾಕ್ ವೀಕ್ಷಕರನ್ನು ಮಾಡದೇ ದೂರದ ಅಥಣಿ ಕಾಗವಾಡಕ್ಕೆ ವೀಕ್ಷಕರನ್ನಾಗಿ ಹಾಕಿದ್ದು, ಈ ಬ್ಲೂಪ್ರಿಂಟ್‍ಗೆ ಮತ್ತಷ್ಟು ಪುಷ್ಠಿ ನೀಡುವಂತಿದೆ. ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಮ್ಮೆ ಜಾರಕಿಹೊಳಿ ವರ್ಸಸ್ ಡಿಕೆಶಿ ವಾರ್ ಆರಂಭವಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.