ಗದಗ: ಅಭಿವೃದ್ಧಿಯೇ ನಮ್ಮ ತಂದೆ-ತಾಯಿ, ಗ್ಯಾರಂಟಿಗಳೇ (Guarantees) ನಮ್ಮ ಬಂಧು ಬಳಗ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.
ರೋಣ ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ವಿವಿಧ ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ವೇಳೆ, ಗ್ಯಾರಂಟಿ ಜಾರಿ ಮಾಡುವ ಮೂಲಕ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ಅನ್ನಭಾಗ್ಯದಲ್ಲಿ ದಾಸೋಹ, ಗೃಹಲಕ್ಷ್ಮೀ ಯೋಜನೆಯಲ್ಲಿ ಸಬಲೀಕರಣ, ಗೃಹಜ್ಯೋತಿ ಮೂಲಕ ಸಮಾಜಕ್ಕೆ ಬೆಳಕು, ಶಕ್ತಿ ಯೋಜನೆ ಮೂಲಕ ಮಹಿಳೆಗೆ ಸ್ವಾತಂತ್ರ್ಯ, ಯುವನಿಧಿ ಮೂಲಕ ಕಾಯಕವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಗರು ಭಾವನೆಗಳ ಜೊತೆ ರಾಜಕಾರಣ ಮಾಡಿದರೆ. ನಾವು ನಮ್ಮ ನಮ್ಮ ಗ್ಯಾರಂಟಿ ಮೂಲಕ ಬಡವರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ. ಜಿ.ಎಸ್. ಪಾಟೀಲ್ ಅವರ ಕುಟುಂಬ ಸೇವಕರ ರೀತಿಯಲ್ಲಿ ಇಲ್ಲಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್. ಪಾಟೀಲ್ ಮಾತನಾಡಿ, ವಿರೋಧ ಪಕ್ಷದವರು ಸರ್ಕಾರದ ಖಜಾನೆ ಖಾಲಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ನನ್ನ ಕ್ಷೇತ್ರದಲ್ಲಿ 200 ಕೋಟಿ ರೂ.ಗೂ ಅಧಿಕ ಅನುದಾನದಲ್ಲಿ ಅಭಿವೃದ್ಧಿ ಯೋಜನೆಗಳ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.
ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸಲು ಜಿಟಿಟಿಸಿ ಆರಂಭಿಸಲಾಗುತ್ತಿದೆ. ಬಡಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಲು 6 ಹಾಸ್ಟೆಲ್ ಆರಂಭಿಸಲಾಗುತ್ತಿದೆ. ನಮ್ಮ ರೋಣ ಮತಕ್ಷೇತ್ರದ ಗ್ರಾಮೀಣ ಪ್ರದೇಶದ ರಸ್ತೆಗಳು ಅಭಿವೃದ್ಧಿಯಾಗಬೇಕು. ಅದೇ ರೀತಿ ಒಣಬೇಸಾಯ ಮಾಡುವ ರೈತರಾಗಿದ್ದು ನೀರಾವರಿ ಯೋಜನೆ ಬಂದಿಲ್ಲ. ಕೃಷ್ಣಾ ನದಿ ಹಾಗೂ ಮಲಪ್ರಭಾ ನದಿ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾಡಬೇಕು. ಮುಂಡರಗಿ ಭಾಗದಲ್ಲಿ ನೂರಾರು ಕೆರೆಗಳನ್ನು ತುಂಬಿಸುವ ಜಾಲವಾಡಗಿ ಯೋಜನೆ ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.