ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಸಂಸದ, ಸಹೋದರ ಡಿ.ಕೆ.ಸುರೇಶ್ ಅವರು ಜಾರಿ ನಿರ್ದೇಶನಾಲಯ ಕಚೇರಿಗೆ ರಾಶಿ ರಾಶಿ ದಾಖಲೆಗಳನ್ನು ಸಲ್ಲಿಸಿದ್ದಾರೆ.
ಇಡಿ ಅಧಿಕಾರಿಗಳ ಸೂಚನೆಯಂತೆ ಡಿ.ಕೆ.ಸುರೇಶ್ ಅವರು ವಕೀಲರೊಂದಿಗೆ ಲೋಕಭವನದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಇಂದು ಆಗಮಿಸಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್ ಅವರ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸುಮಾರು ಐದು ಸಾವಿರ ಪುಟಗಳ ದಾಖಲೆ ಸಲ್ಲಿಸಿದ್ದಾರೆ.
Advertisement
Advertisement
ಇಡಿ ಕಚೇರಿಯಿಂದ ಹೊರಬಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದರು, ವಿಚಾರಣಾ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರ ಆರ್ಥಿಕ ವ್ಯವಹಾರಗಳ ಸಂಬಂಧ ಇಡಿ ಅಧಿಕಾರಿಗಳು ಮಾಹಿತಿ ಕೇಳಿದ್ದರು. ಮಾಜಿ ಸಚಿವರು ಬಂಧನದಲ್ಲಿದ್ದಾರೆ. ಹೀಗಾಗಿ ಅವರ ಪರವಾಗಿ ನಾನು 5 ಸಾವಿರ ಪುಟಗಳ ದಾಖಲೆಗಳನ್ನ ಸಲ್ಲಿಸಿದ್ದೇನೆ. ಇನ್ನೂ ಹೆಚ್ಚಿನ ದಾಖಲೆಗಳನ್ನ ಕೇಳಿದ್ರೆ ತಂದು ಕೊಡುತ್ತೇವೆ ಅಂತ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ತಿಳಿಸಿದರು.
Advertisement
ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದರು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಅಭ್ಯವಾಗಿಲ್ಲ. ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಇನ್ನು ಏನೇನ್ ಆಗಿದೆ ನೋಡಬೇಕು. ಐಟಿ ತನಿಖೆ ಮುಗಿದಿದ್ದು, ಇಡಿ ವಿಚಾರಣೆ ನಡೆಯುತ್ತಿದೆ. ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿದ್ದರಿಂದ ಅದನ್ನೂ ಎದುರಿಸಲು, ಡಿ.ಕೆ.ಶಿವಕುಮಾರ್, ನಾನು ಹಾಗೂ ನಮ್ಮ ಕುಟುಂಬ ಸಿದ್ಧವಾಗಿದೆ ಎಂದರು.
Advertisement
ಸಮನ್ಸ್ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಅಕ್ಟೋಬರ್ 24ಕ್ಕೆ ಮುಂದೂಡಿಕೆ ಆಗಿದೆ. ತಿಹಾರ್ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ತೀರ್ಪು ಏನಾಗುತ್ತದೆ ಅಂತ ಕಾದು ನೋಡಬೇಕಿದೆ ಎಂದು ಹೇಳಿದರು.