ಬೆಂಗಳೂರು: ದಿವಂಗತ ಮಂಜುನಾಥನ ಗೆಳೆಯರ ದರ್ಶನವಾಗಿದೆ. ಒಂದು ಯೂಥ್ ಫುಲ್ ಕಥೆಯನ್ನು ಲವಲವಿಕೆಯಿಂದಲೇ ಹೇಳುತ್ತಾ ಕಡೆಗೆ ಯುವ ಸಮುದಾಯಕ್ಕೊಂದು ಎಚ್ಚರಿಕೆಯ ಸಂದೇಶವನ್ನೂ ರವಾನಿಸುವ ಈ ಚಿತ್ರ ಪ್ರೇಕ್ಷಕರಿಗೆಲ್ಲ ಹೊಸಾ ಅನುಭವ ತುಂಬುವಲ್ಲಿ ಸಫಲವಾಗಿದೆ.
ಎಸ್.ಡಿ ಅರುಣ್ ನಿರ್ದೇಶನದ ಈ ಚಿತ್ರ ಪೋಸ್ಟರುಗಳಲ್ಲಿನ ಫ್ರೆಶ್ ಅನುಭೂತಿಯನ್ನು ಹಾಗೆಯೇ ಕಾಪಿಟ್ಟುಕೊಂಡು ಪ್ರೇಕ್ಷಕರನ್ನು ತಲುಪಿಕೊಂಡಿದೆ. ಸಂಭಾಷಣೆಯಿಂದ ಹಿಡಿದು ಪ್ರತಿಯೊಂದರಲ್ಲಿಯೂ ಸಹಜತೆಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ತಮ್ಮನ ನಡುವಿನ ಪಾತ್ರಗಳೇ ಎಂಬಂಥಾ ಫೀಲು ಹುಟ್ಟಿಸುವಂತೆ ಈ ಚಿತ್ರದ ಪ್ರತೀ ಪಾತ್ರಗಳನ್ನೂ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಯಾವ ಭಾವಗಳೂ ಭಾರ ಅನ್ನಿಸದಂತೆ, ಯಾವ ದೃಶ್ಯಗಳೂ ಬೋರು ಹೊಡೆಸದಂತೆ ಅತ್ಯಂತ ಎಚ್ಚರಿಕೆಯಿಂದ ತಿದ್ದಿ ತೀಡಿದ ಕಲಾಕೃತಿಯಂತೆ ಈ ಚಿತ್ರ ಮೂಡಿ ಬಂದಿದೆ.
Advertisement
Advertisement
ಸಂಜಯ್, ನವೀನ್, ರಾಜ್ ಕಿರಣ್ ಮತ್ತು ಶ್ರೀನಿವಾಸುಲು ಒಟ್ಟಿಗೇ ಓದಿದ್ದ ಗೆಳೆಯರು. ಅವರೆಲ್ಲರೂ ಇಂಜಿನಿಯರಿಂಗ್ ಓದಿ ಕೆಲಸ ಕಾರ್ಯ ಅಂತ ಒಬ್ಬೊಬ್ಬರೂ ಒಂದೊಂದು ದಿಕ್ಕುಗಳಾಗಿರುವಾಗಲೇ ಅವರ ಮತ್ತೋರ್ವ ಗೆಳೆಯ ದಿವಂಗತನಾದ ದುರ್ವಾರ್ತೆ ಬಂದೆರಗುತ್ತೆ. ಹೇಗೋ ಆ ಸಾವಿನ ನೆಪದಲ್ಲಿ ಮತ್ತೆ ಈ ನಾಲ್ವರು ಒಂದೆಡೆ ಸೇರಿತ್ತಾರೆ. ಆದರೆ ಮಂಜುನಾಥ ದಿವಂಗತನಾಗಿದ್ದು ಆತ್ಮಹತ್ಯೆಯಿಂದಲ್ಲ, ಬದಲಾಗಿ ಇದು ಕೊಲೆ ಅಂತ ಪೊಲೀಸ್ ಅಧಿಕಾರಿ ಕೆಂಪಯ್ಯ ಅದಾಗಲೇ ಫೀಲ್ಡಿಗಿಳಿದಿರುತ್ತಾನೆ. ಅದು ನಿಜಕ್ಕೂ ಕೊಲೆಯಾ? ಅದರಲ್ಲಿ ಈ ಗೆಳೆಯರು ತಗುಲಿಕೊಳ್ತಾರಾ ಅಂತೆಲ್ಲ ಪ್ರಶ್ನೆಗಳಿಗೆ ಥೇಟರಿನಲ್ಲಿ ಉತ್ತರ ಹುಡುಕಿದರೆ ಮಜವಾದೊಂದು ಅನುಭವವಾಗೋದು ಖಾತರಿ!
Advertisement
ಸಹಜ ಸಂಭಾಷಣೆಯಲ್ಲಿಯೇ ಲವಲವಿಕೆ, ಹಾಸ್ಯವನ್ನೂ ಬೆರೆಸಿರುವ ನಿರ್ದೇಶಕರು ಪರಿಣಾಮಕಾರಿಯಾಗಿಯೇ ದೃಶ್ಯ ಕಟ್ಟಿದ್ದಾರೆ. ತನ್ನ ಮಗನಿಗೆ ಏನೂ ಕಡಿಮೆಯಾಗದಂತೆ ಪೊರೆದ ತಂದೆ ರಿಟೈರ್ಡು ಸ್ಟೇಜಿಗೆ ಬಂದರೂ ಅಪ್ಪನನ್ನು ನೋಡಿಕೊಳ್ಳಲಾರದ ಮಗ. ಆ ವಯಸ್ಸಲ್ಲಿಯೂ ಮಗನ ನೆರವಿಗಾಗಿ ಸೆಕ್ಯೂರಿಟಿ ಕೆಲಸಕ್ಕೆ ಹೊರಡೋ ಅಪ್ಪನನ್ನು ನೋಡಿ ಮಾನಸಿಕ ವೇದನೆಗೆ ಬೀಳೋ ಪುತ್ರ… ಒಟ್ಟಾರೆಯಾಗಿ ಇಲ್ಲಿ ಸಾವೊಂದರ ಸುತ್ತ ಬದುಕಿನ ಸೂಕ್ಷ್ಮಗಳನ್ನು ಅರಳಿಸುವ ಕುಸುರಿಯಂಥಾದ್ದನ್ನು ನಿರ್ದೇಶಕರು ಮಾಡಿದ್ದಾರೆ.
Advertisement
ಆರಂಭದಿಂದ ಅಂತ್ಯದವರೆಗೂ ಕುತೂಹಲ ಕಾಯ್ದಿಟ್ಟುಕೊಂಡೇ ಈ ಚಿತ್ರ ಯುವ ಸಮೂಹಕ್ಕೆ, ಅದರಲ್ಲಿಯೂ ವಿಶೇಷವಾಗಿ ಗಂಡು ಮಕ್ಕಳಿಗೊಂದು ಸ್ಪಷ್ಟವಾದ, ಪರಿಣಾಮಕಾರಿಯಾದ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ. ಅದರ ಜೊತೆ ಜೊತೆಗೇ ಒಂದೊಳ್ಳೆ ಚಿತ್ರ ನೋಡಿದ ತೃಪ್ತ ಬಾವವೂ ಪ್ರೇಕ್ಷಕರನ್ನು ತುಂಬಿಕೊಳ್ಳುತ್ತದೆ. ಯುವ ಸಮುದಾಯ, ಪೋಷಕರು ಸೇರಿದಂತೆ ಎಲ್ಲರೂ ನೋಡಬಹುದಾದ ಚಿತ್ರ ದಿವಂಗತ ಮಂಜುನಾಥನ ಗೆಳೆಯರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv