– ಆಸ್ತಿಯ ಕುರಿತು ತಪ್ಪು ಮಾಹಿತಿ ಆರೋಪ
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಾಮಪತ್ರದ ವೇಳೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿ, ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಗುಜರಾತ್‍ನ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಅಮಿತ್ ಶಾ ನಾಮಪತ್ರ ಸಲ್ಲಿಸಿದ್ದು, ಆಸ್ತಿಯ ವಿವರದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
Advertisement
Advertisement
ಅಮಿತ್ ಶಾ ಅವರು ಪ್ರಮುಖವಾಗಿ ಎರಡು ಆಸ್ತಿಯ ಕುರಿತು ಸರಿಯಾದ ಮಾಹಿತಿ ನೀಡಿಲ್ಲ. ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
Advertisement
ಕಾಂಗ್ರೆಸ್ ಆರೋಪ ಏನು?:
ಅಮಿತ್ ಶಾ ಅವರು ಗಾಂಧಿನಗರದಲ್ಲಿ ಒಂದು ಪ್ಲಾಟ್ ಹೊಂದಿದ್ದಾರೆ. ಅವರ ಪುತ್ರ ಖಾಸಗಿ ವಾಣಿಜ್ಯ ಬ್ಯಾಂಕ್‍ನಲ್ಲಿ ಸಾಲ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಪ್ಲಾಟ್ ಕುರಿತು ನೀಡಿರುವ ಮಾಹಿತಿ ಪ್ರಕಾರ ಅದರ ಬೆಲೆಯನ್ನು 25 ಲಕ್ಷ ರೂ. ಎಂದು ಹೇಳಲಾಗಿದೆ. ಆದರೆ ಅದರ ಅಂದಾಜು ಬೆಲೆ 66.5 ಲಕ್ಷಕ್ಕೂ ಅಧಿಕವಾಗಿದೆ. ಹೀಗಾಗಿ ಅವರು ನಾಮಪತ್ರದಲ್ಲಿ ತಪ್ಪು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಕಾಂಗ್ರೆಸ್ ದೂರಿದೆ.
Advertisement
ನಾಮಪತ್ರ ಸಲ್ಲಿಸುವುದಕ್ಕಿಂತ ಮೊದಲೇ ಅಮಿತ್ ಶಾ ಅವರು 2016ರಲ್ಲಿ ಪುತ್ರ ಜೈ ಷಾ ಕಂಪನಿಗೆ ತಮ್ಮ ದಾಖಲೆಗಳನ್ನು ಅಡಮಾನವಿಟ್ಟು ಸಾಲ ಕೊಡಿಸಿದ್ದಾರೆ. ಈ ಸಾಲದ ಮೊತ್ತವು 25 ಕೋಟಿ ರೂ. ಇದ್ದು, ಅಮಿತ್ ಶಾ ಎರಡು ಆಸ್ತಿಯ ದಾಖಲೆಗಳನ್ನು ಕೊಲ್ಹಾಪುರ್ ಕಮರ್ಷಿಯಲ್ ಬ್ಯಾಂಕ್‍ನಲ್ಲಿ ಅಡಮಾನು ಇಟ್ಟಿದ್ದಾರೆ. ಆದರೆ ಅವರು ಆ ದಾಖಲೆಗಳ ಕುರಿತು ಮಾಹಿತಿ ನೀಡಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ.
ಅಮಿತ್ ಶಾ ಅವರು ತಿಳಿಯದೇ ಈ ತಪ್ಪು ಮಾಡಿಲ್ಲ. ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.