ಚಿಕ್ಕಬಳ್ಳಾಪುರ: ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಆಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ತಾಲೂಕಿನ ಮುದ್ದೇನಹಳ್ಳಿಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಇನ್ನೂ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ. ಇನ್ನು ಯಾರೂ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗಿಲ್ಲ. ಮುಂಬರುವ ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ನಾವೇ ಗೆಲ್ಲುವುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
Advertisement
Advertisement
ವಿಜಯನಗರ ಪ್ರತ್ಯೇಕ ಜಿಲ್ಲೆ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲರೂ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಚರ್ಚಿಸಿ ಒಳ್ಳೆಯ ನಿಲುವು ತೆಗೆದುಕೊಳ್ಳಲಿದ್ದಾರೆ. ಒಳ್ಳೆಯ ಕಾರ್ಯಗಳು ಆಗಬೇಕಿದೆ, ಹೀಗಾಗಿ ಪ್ರತ್ಯೇಕ ಜಿಲ್ಲೆ ಆ ಭಾಗದ ಜನರ ಬೇಡಿಕೆಯಾಗಿದೆ. ಜನರ ಬೇಡಿಕೆ ಈಡೇರಿಸುವುದು ಸರ್ಕಾರದ ಕರ್ತವ್ಯ ಎಂದರು.
Advertisement
ಮುಖ್ಯಮಂತ್ರಿಗಳ ನಿಲುವಿನಂತೆ ಅನುಷ್ಠಾನ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ. ವಿಜಯನಗರ ಇತಿಹಾಸ ಪ್ರಸಿದ್ಧ ಸ್ಥಳ, ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ. ವಿಜಯನಗರ ಒಂದು ಜಿಲ್ಲೆಯಾಗಿ ಬೆಳೆಯಲು ಎಲ್ಲರೂ ಮುಖ್ಯಮಂತ್ರಿಗಳ ನಿರ್ಧಾರವನ್ನು ಸ್ವಾಗತಿಸಬೇಕು. ವಿಜಯನಗರ ಜಿಲ್ಲೆಯಾಗಿ ಮಾಡಲು ತಯಾರಿ ನಡೆದಿದೆ ಎಂದು ಸ್ಪಷ್ಟಪಡಿಸಿದರು.
Advertisement
ಬಿಜೆಪಿಯಿಂದ ನೂತನ ಬಿಬಿಎಂಪಿ ಮೇಯರ್ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಮೇಯರ್ ಆಯ್ಕೆಗೆ ಭಾರೀ ಬೇಡಿಕೆಯಿದೆ. ಬಿಬಿಎಂಪಿಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತವಿದ್ದರೂ ಅಧಿಕಾರ ಸಿಕ್ಕಿರಲಿಲ್ಲ. ಈಗ ಒಳ್ಳೆಯ ಅವಕಾಶಕ್ಕಾಗಿ ಎಲ್ಲರೂ ಹಾತೊರೆಯುತ್ತಿದ್ದಾರೆ. ನಾಳೆ ಸಂಜೆ ನೂತನ ಮೇಯರ್ ಆಯ್ಕೆ ಘೋಷಣೆ ಆಗುತ್ತದೆ ಎಂದು ತಿಳಿಸಿದರು.