– ವಿರೋಧಿಗಳಿಗೆ ಟಾಂಗ್ ಕೊಟ್ಟ ಅನರ್ಹ ಶಾಸಕ ಸುಧಾಕರ್
ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಹುತೇಕ ವಿಪಕ್ಷಗಳು ಮಹಾಘಟ ಬಂಧನ್ ಮಾಡಿಕೊಂಡರೂ ಮೋದಿಯವರು ಗೆಲ್ಲಲಿಲ್ವಾ! ಅದೇ ರೀತಿ ನನ್ನ ವಿರೋಧಿಗಳೆಲ್ಲಾ ಸೇರಿ ಮಹಾಘಟಬಂಧನ್ ಮಾಡಿಕೊಂಡರೂ ಅವರು ಸೋಲುವುದು ನಿಶ್ಚಿತ ಎಂದು ಅನರ್ಹ ಶಾಸಕ ಡಾ. ಸುಧಾಕರ್ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ತಾಲೂಕಿನ ಅವಲಗುರ್ಕಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅನರ್ಹ ಶಾಸಕ ಸುಧಾಕರ್, ವಿರೋಧಿಗಳನ್ನ ಕುತಂತ್ರಿಗಳಿಗೆ ಹೋಲಿಸಿದರು. ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಮಂತ್ರಿಸ್ಥಾನ ಕಳೆದುಕೊಂಡಿದ್ದಕ್ಕೆ ನೋವಿನಿಂದ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಅವರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಅದಕ್ಕೆ ಈಗಾಗಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು ಮುಂದುವರಿಸಲು ಹೋಗೋದಿಲ್ಲ ಎಂದರು.
Advertisement
Advertisement
ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರಿಗೆ ಹಿನ್ನೆಡೆ ಮುನ್ನೆಡೆ ಎಂಬುವುದು ಇರುವುದಿಲ್ಲ, ತೀರ್ಪು ಮಾತ್ರ ಬರುತ್ತೆ. ಆ ತೀರ್ಪು ಬಂದಾಗ ಸತ್ಯ ಹರಿಶ್ಚಂದ್ರ ರಮೇಶ್ ಕುಮಾರ್ ತೀರ್ಪು ಏನೆಂದು ನ್ಯಾಯಾಲಯ ಹೇಳುತ್ತೆ. ಆಗ ಇಡೀ ದೇಶಕ್ಕೆ ಸತ್ಯವಂತರು ಯಾರು? ಅಸತ್ಯವಂತರು ಯಾರು? ಎಂಬುವುದು ತಿಳಿಯುತ್ತದೆ ಎಂದು ಮಾಜಿ ಸ್ಪೀಕರ್ ವಿರುದ್ಧ ಕಿಡಿಕಾರಿದರು.
Advertisement
ಸದ್ಯ ತಾನು ಯಾವುದೇ ಪಕ್ಷದಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷ ನನ್ನನ್ನು ವಜಾ ಮಾಡಿದೆ. ಹೀಗಾಗಿ ನಾನು ಅನರ್ಹತೆ ಕ್ರಮದ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದೇನೆ. ತೀರ್ಪು ಬರುವವರೆಗೂ ನಾನು ಕಾಯುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ವರ್ಗಾವಣೆ ಬಗ್ಗೆ ನನಗೇನು ಗೊತ್ತಿಲ್ಲ. ನಾನು ಮಂತ್ರಿಯೂ ಅಲ್ಲ, ಶಾಸಕನೂ ಅಲ್ಲ ಎಂದು ಮಾಧ್ಯಮಗಳ ಪ್ರಶ್ನೆಯಿಂದ ಜಾರಿಕೊಂಡರು.
Advertisement
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಸಂಸದ ಬಿಎನ್ ಬಚ್ಚೇಗೌಡ ಅವರೊಂದಿಗೆ ವೇದಿಕೆ ಹಂಚಿಕೊಂಡ ಸುಧಾಕರ್ ಅವಲಗುರ್ಕಿ ಗ್ರಾಮದಲ್ಲಿ ಆರಂಭವಾದ ನೂತನ ರಾಜೀವ್ ಗಾಂಧಿ ಸೇವಾ ಕೇಂದ್ರದ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ ಸುಧಾಕರ್, ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ರಾಜಕಾರಣ ಬಿಟ್ಟು ಅಭಿವೃದ್ದಿ ಕಡೆ ಗಮನ ಕೊಡಿ ಎಂದು ಇದೇ ವೇಳೆ ಸಲಹೆ ನೀಡಿದರು. ಪ್ರತಿಯೊಬ್ಬರೂ ಮೋದಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಪರೋಕ್ಷವಾಗಿ ಬಿಜೆಪಿ ಕಾರ್ಯಕರ್ತರಿಗೆ ತಾನು ಬಿಜೆಪಿ ಪಕ್ಷ ಸೇರಿದ್ದೇನೆ ಎಂಬ ಸಂದೇಶ ರವಾನಿಸಿದರು.