ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜೆಡಿಎಸ್ ಅನರ್ಹ ಶಾಸಕ ನಾರಾಯಣ ಗೌಡ ಭೇಟಿಯಾದರು. ಅನಾರೋಗ್ಯದಿಂದ ಬಳಲುತ್ತಿರುವ ಡಿ.ಕೆ.ಶಿವಕುಮಾರ್ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ವಿಶ್ರಾಂತಿ ನಡುವೆ ರಾಜಕೀಯ ಮುಖಂಡರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗುತ್ತಿದ್ದಾರೆ.
ಡಿಕೆಶಿ ಭೇಟಿ ಬಳಿಕ ಮಾತನಾಡಿದ ನಾರಾಯಣ ಗೌಡರು, ದೀಪಾವಳಿ ಹಬ್ಬದ ಹಿನ್ನೆಲೆ ಶುಭಾಶಯ ತಿಳಿಸಲು ಡಿಕೆ ಶಿವಕುಮಾರ್ ನಿವಾಸಕ್ಕೆ ಬಂದಿದ್ದೇನೆ. ರಾಜಕೀಯ ಹೊರತಾಗಿ ಕಳೆದ 20 ವರ್ಷಗಳಿಂದ ನಾನು ಮತ್ತು ಡಿಕೆ ಶಿವಕುಮಾರ್ ಆಪ್ತ ಸ್ನೇಹಿತರು. ಕಾಂಗ್ರೆಸ್ ಸರ್ಕಾರವಿದ್ದಾಗ ನನ್ನ ಕ್ಷೇತ್ರದ ಅಭಿವೃದ್ಧಿಗೆ ಡಿಕೆ ಶಿವಕುಮಾರ್ ಸಹಾಯ ಮಾಡಿದ್ದರು. ಜೈಲಿಗೆ ಹೋದ ಬಳಿಕ ಅವರನ್ನ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ಆಗಮಿಸಿ ಹಬ್ಬದ ಶುಭಾಶಯ ತಿಳಿಸಿದ್ದೇನೆ ಎಂದರು.
Advertisement
Advertisement
ಹೆಚ್‍ಡಿಕೆ ವಿರುದ್ಧ ಗರಂ: ಬಿಜೆಪಿ ಸರ್ಕಾರ ಬೀಳಿಸಲ್ಲ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ನಾರಾಯಣ ಗೌಡರು, ಅವರು ದೊಡ್ಡವರು ಏನು ಬೇಕಾದರು ಹೇಳಬಹುದು. ಕುಮಾರಸ್ವಾಮಿ ಅವರು ಇವತ್ತು ಒಂದು, ಬೆಳಗ್ಗೆಗೊಂದು ಹೇಳಿಕೆ ನೀಡುತ್ತಾರೆ. ಅವರ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ರಾಜಕಾರಣ ಅನ್ನೋದು ಹಣೆಬರಹ. ಏನು ಆಗತ್ತೋ ಎಂಬುವುದು ಗೊತ್ತಿಲ್ಲ. ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ದು, ಶಾಸಕರಾಗಿ ಉಳಿದುಕೊಳ್ಳುತ್ತೇವೆ ಎಂದು ನಾರಾಯಣ ಗೌಡರು ವಿಶ್ವಾಸ ವ್ಯಕ್ತಪಡಿಸಿದರು.