ಭೂಮಿಯ ಮೇಲೆ ನಡೆದಾಡಿದ ಅತ್ಯಂತ ಉಗ್ರ ಪರಭಕ್ಷಕಗಳಲ್ಲಿ ಒಂದೆಂದು ಹೇಳಲಾಗುವ ಡೈನೋಸಾರ್ (Dinosaur) ಸಂತತಿಯ ಟೈರನ್ನೊಸಾರಸ್ ರೆಕ್ಸ್ (Tyrannosaur Rex) ಬಗ್ಗೆ ಜಗತ್ತಿಗೆ ಇಂದಿಗೂ ಕುತೂಹಲವಿದೆ. ಅದೇ ಕಾರಣಕ್ಕೆ ವಿಜ್ಞಾನಿಗಳು ಇಂದಿಗೂ ಅವುಗಳ ಬಗ್ಗೆ ಅಧ್ಯಯನ ನಡೆಸುತ್ತಲೇ ಇದ್ದಾರೆ. ಆದರೆ ಟೈರನ್ನೊಸಾರಸ್ ರೆಕ್ಸ್ ಪಳೆಯುಳಿಕೆಗಳ ಅಧ್ಯಯನದಲ್ಲಿ ಕೆಲವು ಅಡೆತಡೆಗಳು ಎದುರಾಗುತ್ತಿತ್ತು, ಅವುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಟೈರನ್ನೊಸಾರಸ್ ರೆಕ್ಸ್‌ನ ಗುಣಲಕ್ಷಣಗಳು ಮತ್ತು ಜೀವನಶೈಲಿಯ ಹಲವಾರು ವೈಶಿಷ್ಟ್ಯಗಳು ಇನ್ನೂ ಚರ್ಚೆಯಲ್ಲಿಯೇ ಉಳಿದಿವೆ. ಅವುಗಳ ಜೀವನಶೈಲಿ ಹೇಗಿತ್ತು? ಅವು ನಿಜವಾಗಿಯೂ ಎಷ್ಟು ದೊಡ್ಡದಾಗಿದ್ದವು? ಅದು ಎಷ್ಟು ವೇಗವಾಗಿ ಓಡಿ ಬೇಟೆಯಾಡುತ್ತಿತ್ತು ಎಂಬ ಪ್ರಶ್ನೆಗಳು ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ. ಇವುಗಳ ಪಳೆಯುಳಿಕೆಗಳು 66 ಮಿಲಿಯನ್ ವರ್ಷಗಳಿಗಿಂತಲೂ ಹಳೆಯದಾಗಿದ್ದು, ಉತ್ತರ ಅಮೆರಿಕಾದಾದ್ಯಂತ ಹೆಚ್ಚಾಗಿ ಪತ್ತೆಯಾಗಿವೆ. ಅಮೆರಿಕದ ಮೊಂಟಾನಾ ಮತ್ತು ದಕ್ಷಿಣ ಡಕೋಟಾದಲ್ಲಿ ಹೆಚ್ಚಾಗಿ ಇವುಗಳ ಪಳೆಯುಳಿಕೆಗಳು ಪತ್ತೆಯಾಗಿವೆ.
ಟೈರನ್ನೊಸಾರಸ್ ಎಂದರೆ ಗ್ರೀಕ್ ಭಾಷೆಯಲ್ಲಿ ಕ್ರೂರ ಹಲ್ಲಿ ಎಂದರ್ಥ. ರೆಕ್ಸ್ ಲ್ಯಾಟಿನ್ ಭಾಷೆಯಲ್ಲಿ ರಾಜ ಎಂದರ್ಥ, ಆದ್ದರಿಂದ ಟಿ. ರೆಕ್ಸ್ ಕ್ರೂರ ಹಲ್ಲಿಗಳ ರಾಜ ಎಂದು ಸಹ ಕರೆಯಲಾಗುತ್ತದೆ.
ಟೈರನ್ನೊಸಾರಸ್ ರೆಕ್ಸ್ ಅದೆಷ್ಟು ದೈತ್ಯ ಗೊತ್ತಾ?
ಇಲ್ಲಿಯವರಿಗೂ ಪತ್ತೆಯಾದ ಟೈರನ್ನೊಸಾರಸ್‌ನ ಪಳಯುಳಿಕೆಗಳ ಮಾಹಿತಿ ಪ್ರಕಾರ, ಇವು 43 ಅಡಿ (13.1 ಮೀಟರ್) ಉದ್ದ, 13 ಅಡಿ (4 ಮೀಟರ್) ಎತ್ತರ ಮತ್ತು 24,000 ಪೌಂಡ್ (11,000 ಕೆಜಿ) ವರೆಗೆ ತೂಗುತ್ತವೆ. ಬಹುಶಃ ಇವು 50 ಅಡಿ (15 ಮೀಟರ್) ಉದ್ದ ಬೆಳೆಯಬಹುದು. 16 ಅಡಿ (5 ಮೀ) ಎತ್ತರಕ್ಕೆ ಬೆಳೆಯುತ್ತಿದ್ದವು, 33,000 ಪೌಂಡ್ (15,000 ಕೆಜಿ) ಹೊಂದಿದ್ದವು ಎಂದು ಪಳಯುಳಿಕೆಗಳ ಆಧಾರದ ಮೇಲೆ ಅಂದಾಜಿಸಲಾಗಿದೆ.
ಪಳೆಯುಳಿಕೆಗಳ ಸೊಂಟದ ಆಕಾರದ ಆಧಾರದ ಮೇಲೆ, ಹೆಣ್ಣು ಟಿ. ರೆಕ್ಸ್ ಗಂಡಿಗಿಂತ ಸಾವಿರ ಪೌಂಡ್‌ಗಳಷ್ಟು ಹೆಚ್ಚಿನ ತೂಕ ಹೊಂದಿದ್ದವು ಎಂದು ನಂಬಲಾಗಿದೆ. ಈ ಗುಣಲಕ್ಷಣಕ್ಕೆ ಕಾರಣವೆಂದರೆ, ದೊಡ್ಡ ಗಾತ್ರದ ಮೊಟ್ಟೆಗಳನ್ನು ಇಡಬೇಕಾಗಿತ್ತು ಇದರಿಂದ ಹೆಣ್ಣು ಗಾತ್ರದಲ್ಲಿ ದೊಡ್ಡದಾಗಿದ್ದವು. ಅಲ್ಲದೇ ಹೆಣ್ಣು ಶಕ್ತಿಶಾಲಿಯಾಗಿದ್ದು, ಬೇಟೆಯಲ್ಲಿ ನೈಪುಣ್ಯತೆ ಹೊಂದಿದ್ದವು ಎಂದು ಅಧ್ಯಯನಗಳು ತಿಳಿಸಿವೆ.
ಕೆನಡಾದಲ್ಲಿ ಪತ್ತೆಯಾದ ಪಳೆಯುಳಿಕೆ ಇದುವರೆಗೆ ಕಂಡುಬಂದಿರುವ ಅತ್ಯಂತ ಭಾರವಾದ ಟೈರನ್ನೊಸಾರಸ್ ರೆಕ್ಸ್ ಮಾದರಿದ್ದಾಗಿದೆ. ಇದು ಜೀವಿತಾವಧಿಯಲ್ಲಿ ಅಂದಾಜು 19,500 ಪೌಂಡ್‌ಗಳಷ್ಟು ತೂಕವಿತ್ತು ಎಂದು ಊಹಿಸಲಾಗಿದೆ. ಅವುಗಳ ಮೂಳೆಗಳು ಟೊಳ್ಳಾದ ರಚನೆಯನ್ನು ಹೊಂದಿದ್ದು ಅದು ನೀರಿನಲ್ಲಿ ತೇಲಲು ಸಹಾಯ ಮಾಡುತ್ತಿತ್ತು ಎನ್ನಲಾಗಿದೆ.
ಟೈರನ್ನೊಸಾರಸ್ ಬುದ್ದಿವಂತಿಕೆ ಎಷ್ಟು ಗೊತ್ತಾ?
ಟೈರನ್ನೊಸಾರಸ್‌ನ ಮೆದುಳಿನ ಮೇಲಿನ ಅಧ್ಯಯನಗಳು ಅದು ಬಬೂನ್‌ಗಳಂತೆಯೇ ಬುದ್ಧಿವಂತಿಕೆ ಹೊಂದಿದ್ದವು ಎಂದು ಹೇಳುತ್ತವೆ. ಇನ್ನೂ 2024ರ ಅಧ್ಯಯನಗಳು ಟೈರನ್ನೊಸಾರಸ್‌ನ ಬುದ್ಧಿಮತ್ತೆ ಮೊಸಳೆಗಳಷ್ಟಿತ್ತು ಎಂಬುದನ್ನು ಉಲ್ಲೇಖಿಸಿವೆ.
ಟೈರನ್ನೊಸಾರಸ್‌ನ ಕೈಗಳಂತಿರುವ ಅಂಗಗಳ ಬಗ್ಗೆ ಇನ್ನೂ ತಿಳಿದಿಲ್ಲ. ಆದರೆ ಅವು ಬೇಟೆಯಾಡುವ ಪ್ರಾಣಿಗಳೊಂದಿಗೆ ಹೋರಾಡಲು ಸಹಕಾರಿಯಾಗಿದ್ದುವು ಎಂದು ಅಂದಾಜಿಸಲಾಗಿದೆ. ಅವು ಭೂಮಿಯ ಜೀವಿಗಳಲ್ಲಿಯೇ ಅತ್ಯಂತ ಬಲಿಷ್ಠ ದವಡೆಯನ್ನು ಹೊಂದಿದ್ದವು. ಭೂಮಿ ಮೇಲೆ ಸುಮಾರು 2.5 ಬಿಲಿಯನ್ ಸಂಖ್ಯೆಯಷ್ಟಿದ್ದವು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
66 ಮಿಲಿಯನ್ ವರ್ಷಗಳ ಹಿಂದೆ ಕ್ಷುದ್ರಗ್ರಹವೊಂದು ಭೂಮಿಗೆ ಡಿಕ್ಕಿ ಹೊಡೆದ ಬಳಿಕ ಟೈರನ್ನೊಸಾರಸ್ ಮತ್ತು ಡೈನೋಸಾರ್‌ಗಳು ನಾಶವಾದವು ಎಂದು ನಂಬಲಾಗಿದೆ. ಇವುಗಳ ಬಗ್ಗೆ ನಿರಂತರ ಅಧ್ಯಯನ ನಡೆಯುತ್ತಲೇ ಇದೆ.
ಟೈರನ್ನೊಸಾರಸ್ ಅಧ್ಯಯನಕ್ಕೆ ಇರುವ ತೊಡಕುಗಳೇನು?
ಶ್ರೀಮಂತ ವ್ಯಕ್ತಿಗಳು ಟೈರನ್ನೊಸಾರಸ್ ರೆಕ್ಸ್ ಪಳೆಯುಳಿಕೆಗಳನ್ನು ಖರೀದಿಸುತ್ತಿರುವುದು ಅವುಗಳ ಸಂಶೋಧನೆಗೆ ತೊಡಕಾಗುತ್ತಿದೆ ಎಂದು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ. ಖಾಸಗಿ ಸಂಗ್ರಹಗಳಲ್ಲಿ ಪಳೆಯುಳಿಕೆಗಳನ್ನು ಇರಿಸಲಾಗುವುದರಿಂದ ಅವು ಸಂಶೋಧನೆಗೆ ಹೆಚ್ಚು ಲಭ್ಯವಾಗುತ್ತಿಲ್ಲ.
ಡೈನೋಸಾರ್ ಅಸ್ಥಿಪಂಜರಗಳನ್ನು ಅಲಂಕಾರಿಕ ವಸ್ತುಗಳಂತೆ ಮಾರಾಟ ಮಾಡಲಾಗುತ್ತಿದೆ. ಪಳೆಯುಳಿಕೆಗಳು 1.55 ಮಿಲಿಯನ್ ಡಾಲರ್‌ನಿಂದ (13.18,007 ಕೋಟಿ ರೂ.) 38.68 ಮಿಲಿಯನ್ ಡಾಲರ್‌ವರೆಗೆ (3,28,92,44,698 ರೂ.) ಮಾರಾಟವಾಗುತ್ತವೆ. ಪ್ರಸ್ತುತ ಸಾರ್ವಜನಿಕ ಟ್ರಸ್ಟ್‌ಗಳಲ್ಲಿ 61 ಟಿ. ರೆಕ್ಸ್ ಪಳೆಯುಳಿಕೆಗಳಿವೆ. 71 ಪಳಯುಳಿಕೆಗಳು ಖಾಸಗಿಯವರ ಕೈಯಲ್ಲಿವೆ. ಇದರಿಂದ ವೈಜ್ಞಾನಿಕ ಅಧ್ಯಯನಕ್ಕೆ ಕಡಿಮೆ ಮಾದರಿಗಳು ಲಭ್ಯವಿದೆ. ಇದು ಸಂಶೋಧನೆಗಳಿಗೆ ತೀವ್ರ ಹಿನ್ನಡೆಗೆ ಕಾರಣವಾಗಿದೆ.
ಈ ರೀತಿ ಹಣಕ್ಕಾಗಿ ಖಾಸಗಿ ವ್ಯಕ್ತಿಗಳು ಪಳಯುಳಿಕೆ ಸಂಗ್ರಹಕ್ಕೆ ಮುಂದಾಗುತ್ತಿದ್ದು, ಮಾರಾಟ ಮಾಡುತ್ತಿದ್ದಾರೆ. ಇದರಿಂದ ವಿಜ್ಞಾನಿಗಳಿಗೆ ಪಳಯುಳಿಕೆಗಳ ಮಾದರಿ ಲಭ್ಯವಾಗುತ್ತಿಲ್ಲ. ಇಂತಹ ಬೆಳವಣಿಗೆಯಿಂದಾಗಿ ಟೈರನ್ನೊಸಾರಸ್ ಬಗೆಗಿನ ಎಷ್ಟೋ ಅಂಶಗಳು ನಿಗೂಢವಾಗಿಯೇ ಉಳಿದಿವೆ ಎಂಬುದು ವಿಜ್ಞಾನಿಗಳ ಆತಂಕವಾಗಿದೆ.