ವಾಷಿಂಗ್ಟನ್: ವಿಶ್ವದಾದ್ಯಂತ ಅನೇಕ ಕಂಪನಿಗಳು ವೆಚ್ಚ ಕಡಿತ ಹಾಗೂ ಇತರ ಕಾರಣಗಳನ್ನು ನೀಡಿ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿರುವುದು (Layoff) ಇತ್ತೀಚೆಗೆ ನಡೆಯುತ್ತಲೇ ಇದೆ. ಇದೀಗ ಪ್ರಸಿದ್ಧ ಮನರಂಜನಾ ಸಂಸ್ಥೆ ಡಿಸ್ನಿ (Disney) ಕೂಡಾ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲು ಮುಂದಾಗಿದೆ.
ಕಂಪನಿ ಸುಮಾರು 5.5 ಬಿಲಿಯನ್ ಡಾಲರ್ ವೆಚ್ಚ ಕಡಿತ ಮಾಡುವ ಸಲುವಾಗಿ ಮೊದಲ ಸುತ್ತಿನ ವಜಾವನ್ನು ಕಾರ್ಯಗತಗೊಳಿಸಲು ಮುಂದಾಗಿದೆ. ಇದು ಈ ವಾರದಲ್ಲಿ ಜಾರಿಗೆ ಬರಲಿದ್ದು, ಸುಮಾರು 7,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಮತ್ತೆ ಚೀನಾಗೆ ಮರಳಿದ ಜಾಕ್ ಮಾ
ವರದಿಗಳ ಪ್ರಕಾರ ಡಿಸ್ನಿ ಎಂಟರ್ಟೈನ್ಮೆಂಟ್, ಡಿಸ್ನಿ ಪಾರ್ಕ್ಸ್, ಅನುಭವ ಹಾಗೂ ಉತ್ಪನ್ನ, ಕಾರ್ಪೊರೇಟ್ ಸೇರಿದಂತೆ ಸಂಸ್ಥೆಯ ಹಲವು ಪ್ರಮುಖ ವಿಭಾಗಗಳ ಮೇಲೆ ಈ ವಜಾ ಪ್ರಕ್ರಿಯೆ ಪರಿಣಾಮ ಬೀರಲಿದೆ. ಸದ್ಯ ಈ ಬಾರಿ ಇಎಸ್‌ಪಿಎನ್‌ನ ಉದ್ಯೋಗಿಗಳ ಮೇಲೆ ಇದು ಪ್ರಭಾವ ಬೀರುವುದಿಲ್ಲ ಎನ್ನಲಾಗಿದ್ದು, ಮುಂದಿನ ವಜಾ ಪ್ರಕ್ರಿಯೆಗಳಲ್ಲಿ ಅಲ್ಲಿನ ಉದ್ಯೋಗಿಗಳನ್ನೂ ಕಡಿತಗೊಳಿಸಲಾಗುತ್ತದೆ ಎಂದು ಊಹಿಸಲಾಗಿದೆ.
ಮೊದಲ ಸುತ್ತಿನ ವಜಾ ಪ್ರಕ್ರಿಯೆ ಈ ವಾರದ ಒಳಗಾಗಿ ನಡೆಯಲಿದ್ದು, ಬಳಿಕ ಏಪ್ರಿಲ್‌ನಲ್ಲಿ ಇನ್ನೂ ಹೆಚ್ಚಿನ ಉದ್ಯೋಗಿಗಳನ್ನು ತೆಗೆದುಹಾಕಲಾಗುತ್ತದೆ ಎಂದು ಕಂಪನಿ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಮೆಮೋದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಸಂಚಾರ ದಟ್ಟಣೆ ನಿವಾರಣೆಗೆ ಪ್ಲಾನ್- ಇದೇ ವರ್ಷ ತಲೆ ಎತ್ತಲಿವೆ 5 ಫ್ಲೈಓವರ್‌ಗಳು!