ಮಡಿಕೇರಿ: ರಾಜ್ಯದ ಸಾವಿರಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಳ್ಳುವ ಕೇಂದ್ರ ಸರ್ಕಾರದ ಕಸ್ತೂರಿ ರಂಗನ್ ವರದಿ (Kasturirangan Report) ಕರಡು ಅಧಿಸೂಚನೆ ವಿರುದ್ಧ ವಿಧಾನಸಭೆಯಲ್ಲಿ ಇಂದು ಮಹತ್ವದ ಚರ್ಚೆ ನಡೆಯಲಿದೆ. ಕೊಡಗು ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದ ರೈತರು ಮತ್ತು ಸಾರ್ವಜನಿಕರ ಆತಂಕವನ್ನು ಸದನದ ಗಮನಕ್ಕೆ ತರುವ ನಿಟ್ಟಿನಲ್ಲಿ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ (AS Ponnanna) ಅವರು ವಿಷಯ ಪ್ರಸ್ತಾಪಿಸಲಿದ್ದಾರೆ.
ರಾಜ್ಯದ ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸುವ ಸಂಬಂಧ ಕೇಂದ್ರ ಸರ್ಕಾರವು (Central Govt) 2026ರ ಜುಲೈ 27ರಂದು ಹೊರಡಿಸಿರುವ ಕರಡು ಅಧಿಸೂಚನೆ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಜ್ಯ ಸರ್ಕಾರ ಈ ವರದಿಗೆ ವಿರೋಧ ವ್ಯಕ್ತಪಡಿಸಿದ್ದರೂ, ಹೊಸ ಕರಡು ಅಧಿಸೂಚನೆಯಲ್ಲಿ ರಾಜ್ಯದ ಸಾವಿರಕ್ಕೂ ಹೆಚ್ಚು ಗ್ರಾಮಗಳು ಸೇರ್ಪಡೆಯಾಗಿರುವುದು ರೈತರು (Farmers), ಬೆಳೆಗಾರರು ಹಾಗೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರು ಇಂದು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಜನರ ಆತಂಕ ನಿವಾರಿಸುವಂತೆ ಸರ್ಕಾರವನ್ನು ಒತ್ತಾಯಿಸಲಿದ್ದಾರೆ. ಶಾಸಕರಾದ ಹೆಚ್.ಡಿ. ತಮ್ಮಯ್ಯ ಹಾಗೂ ಬಿ.ಕೆ. ಸಂಗಮೇಶ್ವರ್ ಅವರೂ ಚರ್ಚೆಯಲ್ಲಿ ಭಾಗವಹಿಸಿ, ಪಶ್ಚಿಮಘಟ್ಟ ಭಾಗದ ಜನರ ಹಿತಾಸಕ್ತಿಯನ್ನು ಕಾಪಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ.
ರೈತರ ಜೀವನೋಪಾಯ, ಭೂಹಕ್ಕು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಲಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ರಾಜ್ಯದ ನಿಲುವು ಹಾಗೂ ರೈತರ ಹಿತಾಸಕ್ತಿಯನ್ನ ರಕ್ಷಿಸುವ ಕುರಿತು ಸದನದಲ್ಲಿ ಮಹತ್ವದ ಚರ್ಚೆ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಕೈಗೊಳ್ಳುವ ಕ್ರಮದತ್ತ ಪಶ್ಚಿಮಘಟ್ಟ ಭಾಗದ ಜನರ ಚಿತ್ತ ನೆಟ್ಟಿದೆ.

