ಚಿಕ್ಕಬಳ್ಳಾಪುರ: ತ್ರಿಚಕ್ರ ವಾಹನ ಸ್ಕೂಟಿಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಸ್ಕೂಟಿಯಲ್ಲಿದ್ದ ವಿಶೇಷಚೇತನ ಸಾವನ್ನಪ್ಪಿದ್ದಾರೆ. ಮಹಿಳೆ ಗಂಭೀರ ಗಾಯಗೊಂಡಿದ್ದು, ದಂಪತಿ ಜೊತೆ ಸ್ಕೂಟಿಯಲ್ಲಿ ಬರುತ್ತಿದ್ದ ಮಕ್ಕಳು ‘ಅಮ್ಮ.. ಅಮ್ಮ..’ ಅಂತ ರಸ್ತೆಯಲ್ಲಿ ಕಣ್ಣೀರಿಟ್ಟಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಬೆಂಗಳೂರು ಹೈವೇಯಲ್ಲಿ ಬೈಪಾಸ್ ರಸ್ತೆಯ ಬನ್ನಿಕುಪ್ಪೆ ಗೇಟ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ತ್ರಿಚಕ್ರದ ಸ್ಕೂಟಿ ಕಾರಿನೊಳಗೆ ಸಿಲುಕಿಕೊಂಡಿದೆ. ಸ್ಕೂಟಿಯಲ್ಲಿದ್ದವರು ದಿಕ್ಕಾಪಾಲಾಗಿ ಬಿದ್ದಿದ್ದು, ಬಾಲಕನೋರ್ವ ಕಾರಿನ ಗಾಜಿನ ಮೇಲೆಯೇ ಬಿದ್ದಿದ್ದಾನೆ. ಘಟನೆಯಲ್ಲಿ ಬೀಡಗಾನಹಳ್ಳಿ ಗ್ರಾಮದ ವಿಶೇಷಚೇತನ ಮುನಿಕೃಷ್ಣಪ್ಪ ದುರ್ಮರಣಕ್ಕೀಡಾಗಿದ್ದಾರೆ. ಆತನ ಪತ್ನಿ ಮುನಿರತ್ನಮ್ಮಳನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಹಿರಿಯ ಮಗ ರಿತೇಶ್‌ನನ್ನ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮತ್ತೊಂದೆಡೆ 8 ವರ್ಷದ ಬಾಲಕನಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಕೇಸ್; ರಾಯಬಾಗದ ಕಾಮುಕ ಸ್ವಾಮಿಗೆ 35 ವರ್ಷ ಜೈಲು
ಬೆಂಗಳೂರು ಮೂಲದ 4 ಮಂದಿ ಯುವಕರು ಕಾರಿನಲ್ಲಿ ಇಶಾ ಆದಿಯೋಗಿ ದರ್ಶನಕ್ಕೆ ಬರುವಾಗ ಅತಿ ವೇಗವಾಗಿ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಕಾರಿನಲ್ಲಿದ್ದ ಯುವಕರನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಳೆ ಭಾನುವಾರ ಮಕ್ಕಳಿಗೆ ರಜೆ ಇದೆ ಅಂತ ಮುನಿರತ್ನಮ್ಮ ತನ್ನ ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ ತವರು ಮನೆ ಜಂಗಾಲಹಳ್ಳಿಗೆ ಹೊರಟಿದ್ದರು. ಹಿಂದೆ ಕಾರೊಂದು ವೇಗವಾಗಿ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಬೈಕ್ ಸವಾರ ವಿಶೇಷಚೇತನ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಾಯಿ ಸ್ಥಿತಿಯೂ ಚಿಂತಾಜನಕವಾಗಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. 11 ವರ್ಷದ ಮಗ ಸಹ ತಲೆಗೆ ಗಂಭೀರವಾದ ಗಾಯವಾಗಿ ನರಳಾಡಿದ್ದಾನೆ. ಈ ಸನ್ನಿವೇಶದಲ್ಲಿ ಅದೃಷ್ಟವಶಾತ್ ಎಂಬಂತೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದ 8 ವರ್ಷದ ಬಾಲಕ ತಾಯಿಯ ತಲೆ ಹಿಡಿದು ‘ಅಮ್ಮ ಅಮ್ಮ’ ಅಂತ ಅಳುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಇದನ್ನೂ ಓದಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ – ಧಗ ಧಗಿಸಿದ ಕಿರಾಣಿ ಅಂಗಡಿ

