ನಿರ್ದೇಶಕ ಸ್ಮೈಲ್ ಶ್ರೀನು ಈಗ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದು, ಅದರ ಮೂಲಕ ಉತ್ತಮ ಚಲನಚಿತ್ರಗಳನ್ನು ನಿರ್ಮಿಸುವ ಗುರಿ ಹೊಂದಿದ್ದಾರೆ. ತಮ್ಮದೇ ಸ್ಮೈಲ್ ಜೋಹರ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಈಗ ‘ಜನನ’ ಎಂಬ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ತಾವೇ ನಿರ್ದೇಶಕರಾಗಿದ್ದರೂ ಮತ್ತೊಬ್ಬ ಹೊಸ ನಿರ್ದೇಶಕನಿಗೆ ಅವಕಾಶ ಕೊಟ್ಟಿದ್ದಾರೆ.
ಈಗಾಗಲೇ ತೂಫಾನ್, ಬಳ್ಳಾರಿ ದರ್ಬಾರ್, ಓ ಮೈ ಲವ್ ನಂಥ ವಿಭಿನ್ನ ಶೈಲಿಯ ಸಿನಿಮಾಗಳನ್ನು ನಿರ್ದೇಶಿಸಿರುವ ಸ್ಮೈಲ್ ಶ್ರೀನು, ಅವರೀಗ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಬರಲಿರುವ ವಿಧಾನಸಭಾ ಚುನಾವಣೆಗೆ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನಿರ್ಮಾಪಕರಾಗಿ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು), ಅವರು ತಮ್ಮ ಚಿತ್ರರಂಗದ ನಂಟನ್ನೂ ಮುಂದುವರಿಸಿದ್ದಾರೆ. ಈಗಿನ ಸಂದರ್ಭದಲ್ಲಿ ಪ್ರಕೃತಿಯ ಬಗ್ಗೆ ಜನರಲ್ಲಿ ಕಾಳಜಿ ಕಮ್ಮಿಯಾಗುತ್ತಿದೆ. ನಾನೇ ಗ್ರೇಟ್ ಅಂತ ಮಾನವ ಬೀಗುತ್ತಿದ್ದಾನೆ. ಒಮ್ಮೆ ಆ ಪ್ರಕೃತಿ ಏನಾದರೂ ಮುನಿಸಿಕೊಂಡರೆ ನಮ್ಮಗತಿ ಏನಾಗಬಹುದು. ನಮಗೆಲ್ಲಾ ಏನೇನು ತೊಂದರೆಯಾಗಬಹುದು ಎಂಬುದನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಅಲ್ಲದೆ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗದಿದ್ದರೆ ಅವರ ಜೀವನ ಯಾವರೀತಿ ಹಾಳಾಗುತ್ತೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಸಲಾಗಿರುವ ಜನನ ಚಿತ್ರವು ಜನವರಿಯಲ್ಲಿ ತೆರೆಕಾಣಲಿದೆ.
ಸಿನಿಮಾ ನಂಟು ಜೊತೆಯಲ್ಲಿರಬೇಕೆಂಬ ಕಾರಣದಿಂದಾಗಿ ಸ್ಮೈಲ್ ಶ್ರೀನು ಅವರು ಮುಂದೆ ದೊಡ್ಡ ಮಟ್ಟದ ಪ್ಯಾನ್ ಇಂಡಿಯಾ ಸಿನಿಮಾವೊಂದನ್ನು ನಿರ್ದೇಶಿಸುವ ಯೋಜನೆ ಹಾಕಿಕೊಂಡಿದ್ದಾರೆ. ದೊಡ್ಡ ಬಜೆಟ್’ನಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾದಲ್ಲಿ ಬಹುತೇಕ ಎಲ್ಲಾ ಭಾಷೆಯ ಸ್ಟಾರ್ ನಟರು ಅಭಿಸನಯಿಸಲಿದ್ದಾರೆ. ಮುಂದಿನ ವರ್ಷ ಶ್ರೀನು ಅವರ ಹೊಸ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಸೆಟ್ಟೇರಲಿದೆ. ಅದಕ್ಕೂ ಮುನ್ನ ಜನನ ಸಿನಿಮಾ ಬಿಡುಗಡೆಯಾಗಲಿದೆ.
ಯುವ ನಿರ್ದೇಶಕ ಮಧುಸೂದನ್ ಅವರು ಆ್ಯಕ್ಷನ್ ಕಟ್ ಹೇಳಿರುವ ಜನನ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ನಮ್ಮ ನಾಡಿಗೆ ಪ್ರಕೃತಿ ತುಂಬಾ ಮುಖ್ಯ. ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂಬ ಸುಂದರ ಸಂದೇಶ ಈ ಚಿತ್ರದಲ್ಲಿದೆ. ಇದನ್ನೂ ಓದಿ:ಬಳ್ಳಾರಿಗೆ ಬರಲಿದ್ದಾರೆ ವಿಜಯ್ ಮತ್ತು ರಶ್ಮಿಕಾ ಮಂದಣ್ಣ
ವರ್ಷಾ ಶೆಟ್ಟಿ ಬೇಬಿ ಮೈರಾ, ಮಾಸ್ಟರ್ ಚಿನ್ಮಯ್, ಬೇಬಿ ಶಾನ್ವಿ, ಬೇಬಿ ಪೂಜಾ, ವರಹ, ಮಂಜುಳಾ, ಕಾವ್ಯ ಹಾಗೂ ಮಂಜು ಸೇರಿದಂತೆ ಮಕ್ಕಳ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ಭರತ್ ಅವರ ಛಾಯಾಗ್ರಹಣ, ಮಲ್ಲಿಕಾರ್ಜುನ್.ಡಿ ಅವರ ಸಂಕಲನ ಕಾರ್ಯ ಈ ಚಿತ್ರಕ್ಕಿದೆ. ಎಲ್ಲಾ ಅಂದುಕೊಂಡಂತೆ ಆದರೆ ಹೊಸ ವರ್ಷದಲ್ಲಿ ‘ಜನನ’ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಬರಲಿದೆ.