‘ಮಂತ್ರಂ’ ಚಿತ್ರದ ಮೂಲಕ ಖ್ಯಾತಿಗಳಿಸಿದ ನಿರ್ದೇಶಕ ಸಂಗಮೇಶ್ ಎಸ್ ಸಜ್ಜನ್ ಎರಡುವರೆ ವರ್ಷದ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಎರಡನೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಕೂಡ ಮಾಡಿದ್ದಾರೆ. ಚಿತ್ರದ ಟೈಟಲ್ ವಿಭಿನ್ನವಾಗಿದ್ದು ಫಸ್ಟ್ ಲುಕ್ ಪೋಸ್ಟರ್ ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ.
‘ಮಂತ್ರಂ’ ಸಿನಿಮಾದಿಂದ ಖ್ಯಾತಿ ಸಿಕ್ಕಿದರು ಮತ್ತೊಂದು ಹೊಸ ಪ್ರಯತ್ನಕ್ಕೆ ಸಮಯ ತೆಗೆದುಕೊಂಡು ಸಕಲ ಸಿದ್ಧತೆಯೊಂದಿಗೆ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ ಸಂಗಮೇಶ್ ಎಸ್ ಸಜ್ಜನ. ಉತ್ತರ ಕರ್ನಾಟಕ ಮೂಲದವರಾದ ಸಂಗಮೇಶ್ ಎಸ್ ಸಜ್ಜನ ಮೂಲತಃ ರಂಗಭೂಮಿ ಕಲಾವಿದರು. ಹಲವಾರು ರಂಗ ನಾಟಕ, ಬೀದಿ ನಾಟಕಗಳನ್ನ ನಿರ್ದೇಶಿಸಿ ಅನುಭವ ಇರುವ ಇವರು, ಸಿನಿಮಾ ನಿರ್ದೇಶಕನಾಗಿ ಹೆಸರು ಮಾಡುತ್ತಿದ್ದಾರೆ.
ಇದೀಗ ಇವರ ಎರಡನೇ ಚಿತ್ರ ‘ಫೋರ್ ವಾಲ್ಸ್ & ಟೂ ನೈಟೀಸ್’ ಚಿತ್ರದ ಪಸ್ಟ್ ಲುಕ್ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಅಂದ್ಹಾಗೆ ಇದು ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರವಾಗಿದ್ದು, ತಂದೆ ಹಾಗೂ ಮಕ್ಕಳ ಕಥೆ ಚಿತ್ರದಲ್ಲಿದೆಯಂತೆ. ಅಚ್ಯುತ್ ಕುಮಾರ್, ದತ್ತಣ್ಣ, ನೀನಾಸಂ ಭಾಸ್ಕರ್, ಜಾನ್ಹವಿ ಜೋಶಿ, ಶ್ರೇಯಾ ಶೆಟ್ಟಿ, ಆಂಚಲ್, ರಘು ರಾಮಪ್ಪ ಚಿತ್ರದ ತಾರಾ ಬಳಗದಲ್ಲಿದ್ದಾರೆ. ನಾಯಕಿ ಪಾತ್ರದಲ್ಲಿ ಡಾ.ಪವಿತ್ರ ನಟಿಸುತ್ತಿದ್ದು, ಸಿನಿಮಾ ಇವರ ಹೊಸ ಪ್ರಯತ್ನ.
ತೆಲುಗಿನ ರುದ್ರಮ್ಮದೇವಿ, ಗರುಡವೇಗ ಚಿತ್ರಗಳಿಗೆ ಸಿನಿಮಾಟೋಗ್ರಾಫರ್ ಆಗಿ ಖ್ಯಾತಿಗಳಿಸಿರುವ ವಿಡಿಆರ್ ಈ ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಆಗಿರೋದು ವಿಶೇಷ. ಇನ್ನೂ ಚಿತ್ರಕ್ಕೆ ಆನಂದ ರಾಜಾ ವಿಕ್ರಮ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಎಸ್.ವಿ. ಪಿಕ್ಚರ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಟಿ.ವಿಶ್ವನಾಥ್ ನಾಯಕ್ ‘ಪೋರ್ ವಾಲ್ಸ್’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯ ಶೇಕಡಾ ಎಂಬತ್ತು ಭಾಗ ಶೂಟಿಂಗ್ ಕಂಪ್ಲೀಟ್ ಮಾಡಿರೋ ‘ಫೋರ್ ವಾಲ್ಸ್’ ಚಿತ್ರತಂಡ ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡಲಿದೆ.