ಒಂದು ಸಿನಿಮಾ ಬಿಡುಗಡೆಯ ಅಂಚಿಗೆ ಬಂದು ನಿಂತಿದೆಯೆಂದರೆ ಅದರ ಹಿಂದೆ ಹತ್ತಾರು ಜನರ ಶ್ರಮ, ಕನಸು, ಶ್ರದ್ಧೆಗಳಿರುತ್ತವೆ. ವಾರವೊಂದಕ್ಕೆ ದಂಡಿ ದಂಡಿ ಸಿನಿಮಾಗಳು ತೆರೆಗಾಣುತ್ತಿರುವ ಈ ಹೊತ್ತಿನಲ್ಲಿ ಅದರ ಭಾಗವಾಗಿರುವವರ ಖಾಸಗೀ ಕಥೆ ಕೇಳಲು, ಬೆನ್ತಟ್ಟಿ ಪ್ರೋತ್ಸಾಹಿಸಲು ಯಾರಿಗೂ ಪುರಸೊತ್ತಿಲ್ಲ. ಸೋಲು ಗೆಲುವುಗಳಾಚೆಗೆ ಒಂದು ಸಿನಿಮಾದ ಹಿಂದೆ ಹತ್ತಾರು ಮನಮುಟ್ಟುವ ಕಥೆಗಳಿರುತ್ತವೆ. ಕಡುಗಷ್ಟ ಸುತ್ತಿಕೊಂಡರೂ ಇಡೀ ಬದುಕನ್ನು ಕನಸಿಗೋಸ್ಕರವೇ ಪಣಕ್ಕಿಟ್ಟಂತೆ ಬದುಕುವ ಅಪರೂಪದ ವ್ಯಕ್ತಿತ್ವಗಳೂ ಸಿನಿಮಾಗಳ ಹಿನ್ನೆಲೆಯಲ್ಲಿರುತ್ತವೆ. ಅಂಥಾದ್ದೊಂದು ಸಿನಿಮಾ ವ್ಯಾಮೋಹವಿಟ್ಟುಕೊಂಡು ಹದಿನೇಳು ವರ್ಷಗಳ ಕಾಲ ಶತಪ್ರಯತ್ನ ನಡೆಸಿ, ಹಂತ ಹಂತವಾಗಿ ಪಳಗಿಕೊಂಡು `ಕೆರೆಬೇಟೆ’ (Kerebete) ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದವರು ರಾಜ್ ಗುರು.
Advertisement
ಇದೀಗ ಎಲ್ಲ ದಿಕ್ಕುಗಳಲ್ಲಿಯೂ ಕೆರೆಬೇಟೆಯ ಬಗ್ಗೆ ಸಕಾರಾತ್ಮಕ ವಾತಾವರಣ ಹಬ್ಬಿಕೊಂಡಿದೆ. ಬಿಡುಗಡೆಗೆ ದಿನಗಣನೆ ಶುರುವಾಗಿರುವ ಈ ಹೊತ್ತಿನಲ್ಲಿ ಸಿನಿಮಾ ರಂಗದವರೂ ಕೂಡಾ ನಿರ್ದೇಶಕ ರಾಜ್ ಗುರು ಕಸುಬುದಾರಿಕೆಯ ಬಗ್ಗೆ ಮೆಚ್ಚುಗೆ, ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ಇನ್ನು ಪ್ರೇಕ್ಷಕರತ್ತ ಕಣ್ಣು ಹಾಯಿಸಿದರೆ ಅಲ್ಲಿಯೂ ಕೂಡಾ ಕೆರೆಬೇಟೆಯೆಡೆಗಿನ ನಿರೀಕ್ಷೆಯ ಹೊಳಪು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದೆಲ್ಲದರ ಹಿಮ್ಮೇಳದಲ್ಲಿ ಖುಷಿಗೊಂಡಿರುವ ರಾಜ್ ಗುರು, ತಮ್ಮ ಇಷ್ಟೂ ವರ್ಷಗಳ ಶ್ರಮ, ಕನಸು, ಪಟ್ಟ ಪಡಿಪಾಟಲುಗಳೆಲ್ಲ ಸಾರ್ಥಕವಾಗೋ ಘಳಿಗೆ ಹತ್ತಿರಾದ ಖುಷಿಯಲ್ಲಿದ್ದಾರೆ.
Advertisement
Advertisement
ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬದವರಾದ ರಾಜ್ ಗುರು (Rajaguru) ಪತ್ರಿಕೋದ್ಯಮ ಪದವೀಧರರೂ ಹಾದು. ಒಂದಷ್ಟು ಕಾಲ ದಿನಪತ್ರಿಕೆಯೊಂದರಲ್ಲಿ ಕಾರ್ಯ ನಿರ್ವಹಿಸಿದ್ದವರಿಗೆ ತನ್ನ ಬದುಕೇನಿದ್ದರೂ ಸಿನಿಮಾಕ್ಕಷ್ಟೇ ಮೀಸಲೆಂಬ ದೃಢ ನಿರ್ಧಾರ ಅಂಟಿಕೊಂಡಿತ್ತು. ಹಾಗೆ ಗಾಂಧಿನಗರದತ್ತ ಬಂದು, ಸಣ್ಣ ಪುಟ್ಟ ಅವಕಾಶಗಳಿಗೆ ಕೈಚಾಚುತ್ತಾ ಅಲೆದಾಡಿದ ದಿನಗಳು, ಅರೆಹೊಟ್ಟೆಯ ಸಂಕಟ, ಕನಿಷ್ಠ ಒಂದು ಸೂರಿಗೂ ದಿಕ್ಕಿಲ್ಲದ ಯಾತನಾಮಯ ಕ್ಷಣಗಳೆಲ್ಲವನ್ನೂ ಕಂಡುಂಡವರು ರಾಜ್ ಗುರು. ಕಡೆಗೂ 2008ರಲ್ಲಿ ತೆರೆಗಂಡಿದ್ದ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಅವರಿಗೊಲಿದಿತ್ತು. ನಿರ್ದೇಶಕ ಎ ಆರ್ ಬಾಬು ಗರಡಿಯಲ್ಲಿ ವರ್ಷಾಂತರಗಳ ಕಾಲ ಪಳಗಿಕೊಂಡಿದ್ದ ರಾಜ್ ಗುರು ಆ ನಂತರ ಗೆಳೆಯ ಪವನ್ ಒಡೆಯರ್ ಜೊತೆಗೂ ಕಾರ್ಯನಿರ್ವಹಿಸಿದ್ದಾರೆ.
Advertisement
ಹೀಗೆ ಹದಿನೇಳು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಪಳಗಿಕೊಂಡಿದ್ದ ರಾಜ್ ಗುರು ಪಾಲಿಗೆ ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿ ಮಾರನ್ ಅಂದರೆ ಅದೆಂಥಾದ್ದೋ ಸೆಳೆತ. ನೆಲಮೂಲದ ಕಥೆಗಳನ್ನು ಅದ್ಭುತವಾಗಿ ದೃಷ್ಯವಾಗಿಸುವ ವೆಟ್ರಿ ಮಾರನ್ ರಾಜ್ ಗುರುಗೆ ಸಾರ್ವಕಾಲಿಕ ಸ್ಫೂರ್ತಿ. ಅವರ ಹಾದಿಯಲ್ಲಿಯೇ ನೆಲದ ಕಥೆಗಳನ್ನು ಕಮರ್ಶಿಯಲ್ ಚೌಕಟ್ಟಿನಲ್ಲಿ ಹೇಳಬೇಕೆಂಬ ಉದ್ದೇಶದಿಂದಲೇ ಅವರು, ಮಲೆನಾಡು ಸೀಮೆಯ ಕೆರೆಬೇಟೆ ಕಥೆಯನ್ನು ಸಿದ್ಧಪಡಿಸಿದ್ದರು. ಆ ನಂತರ ಮಲೆನಾಡಿನವರೇ ಆದ ಗೌರಿಶಂಕರ್ ಅವರ ತುಂಬು ಸಹಕಾರದಿಂದ ಈ ಚಿತ್ರ ಅಣಿಗೊಂಡಿದೆ. ಈ ಮೂಲಕ ತನ್ನ ವೃತ್ತಿಬದುಕು ದಿಕ್ಕು ಬದಲಿಸುತ್ತೆ, ದೊಡ್ಡ ಮಟ್ಟದ ಗೆಲುವು ಲಭಿಸುತ್ತದೆಂಬ ನಂಬಿಕೆ ರಾಜ್ ಗುರು ಅವರಲ್ಲಿದೆ.
ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.