– ಮೀಟರ್ ಬಡ್ಡಿದಂಧೆಕೋರರ ಮೇಲೆ ಸ್ವಯಂ ಕೇಸ್‍ಗೆ ಡಿಸಿಎಂ ತಡೆ?
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರೈತರು, ಮಹಿಳೆಯರು, ಬಡವರ ಶೋಷಣೆ ಮಾಡುತ್ತಿರುವ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸಿಎಂ ಕುಮಾರಸ್ವಾಮಿ ಅವರು ಪೊಲೀಸರಿಗೆ ಅಧಿಕಾರ ನೀಡಿದ ಬೆನ್ನಲ್ಲೇ, ಈ ಆದೇಶಕ್ಕೆ ಕತ್ತರಿ ಬಿದ್ದಿದೆ.
ಹೌದು. ಮೀಟರ್ ಬಡ್ಡಿದಂಧೆ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಎಚ್‍ಡಿಕೆ ಖಡಕ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ್ದರು. ಅಧಿಕಾರವನ್ನು ವಹಿಸಿದ ಬೆನ್ನಲ್ಲೇ ಅಲೋಕ್ ಕುಮಾರ್ ಮೀಟರ್ ದಂಧೆ ನಡೆಸುತ್ತಿದ್ದವರ ನಿವಾಸದ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದರು. ದಂಧೆಕೋರರ ನಿಯಂತ್ರಿಸಲು ಪೊಲೀಸರು ಫೀಲ್ಡ್‍ಗೆ ಇಳಿಯುತ್ತಿದ್ದಂತೆ ಅವರ ಅಧಿಕಾರಕ್ಕೆ ಈಗ ಕತ್ತರಿ ಬಿದ್ದಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಪೊಲೀಸ್ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲು ಮಾಡಬಾರದು ಎಂದು ಸುತ್ತೋಲೆ ಹೊರಡಿಸಿದ್ದಾರೆ.
ಹೊಸ ಸುತ್ತೋಲೆಯಲ್ಲಿ ಏನಿದೆ?
ಸ್ವಯಂ ಪ್ರೇರಿತವಾಗಿ ದೂರು ದಾಖಲಿಸುವ ಅಂಶವನ್ನು ಹಿಂಪಡೆಯಲಾಗಿದೆ. ಹೆಚ್ಚು ಪ್ರಮಾಣದಲ್ಲಿ ಬಡ್ಡಿ ವಸೂಲಿ ಮಾಡುವ ಮತ್ತು ಸಾಲ ಮರುಪಾವತಿಗಾಗಿ ಸಾರ್ವಜನಿಕರನ್ನು ಹಾಗೂ ರೈತರನ್ನು ಶೋಷಿಸುತ್ತಿರುವವರ ವಿರುದ್ಧ ಸಹಕಾರ ಇಲಾಖೆ ಅಧಿಕಾರಿಗಳು ಹಾಗೂ ಶೋಷಿತರಿಂದ ದೂರು ಬಂದಲ್ಲಿ ಮಾತ್ರ ಪ್ರಕರಣ ದಾಖಲಿಸಬೇಕು ಎನ್ನುವ ಅಂಶ ಸುತ್ತೋಲೆಯಲ್ಲಿದೆ.
ಮೀಟರ್ ಬಡ್ಡಿ ದಂಧೆ ನಡೆಸುವರಿಂದ ಶೋಷಣೆಗೆ ಒಳಗಾಗುತ್ತಿದ್ದ ಮಹಿಳೆಯೊಬ್ಬರ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಆ ಕೂಡಲೇ ಎಚ್ಚೆತ್ತ ಸಿಎಂ ಮಹಿಳೆಯ ನೆರವಿಗೆ ಆಗಮಿಸಿ ಸಮಸ್ಯೆ ಬಗೆಹರಿಸುವ ಕುರಿತು ಆಶ್ವಾಸನೆ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ ಇಂತಹ ದಂಧೆಕೋರರ ವಿರುದ್ಧ ಸ್ವಯಂ ದೂರು ದಾಖಲಿಸುವ ಅಧಿಕಾರ ಪೊಲೀಸರಿಗೆ ನೀಡುವುದಾಗಿ ತಿಳಿಸಿದ್ದರು. ಸಿಎಂ ಈ ಭರವಸೆ ನೀಡಿದ ಒಂದೇ ದಿನದಲ್ಲಿ ಡಿಸಿಎಂ ಪರಮೇಶ್ವರ್ ಅವರು ತಮ್ಮ ಬಳಿ ಇರುವ ಗೃಹ ಇಲಾಖೆಯ ಮೂಲಕ ಈ ಸುತ್ತೋಲೆ ಹೊರಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಹಿಂದೆಯೂ ಬಿಜೆಪಿ ಆಪರೇಷನ್ ಕಮಲ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಎಂ ಎಚ್‍ಡಿಕೆ ದಂಧೆಯಲ್ಲಿ ಅಕ್ರಮವಾಗಿ ಗಳಿಸಿದ ಹಣದಿಂದ ಸರ್ಕಾರವನ್ನು ಕೆಡವಲು ಪ್ರಯತ್ನ ನಡೆಸಲಾಗುತ್ತಿದೆ. ಈ ಕುರಿತು ಕಠಿಣ ಕ್ರಮಕೈಗೊಂಡು ಶೀಘ್ರವೇ ಅಂತಹ ದಂಧೆಕೋರರ ಮುಖ ಬಯಲು ಮಾಡುವುದಾಗಿ ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv