ಉಮೇಶ್ ಕತ್ತಿಗೆ ಟಿವಿಗಳಲ್ಲಿ ಹೆಡ್‍ಲೈನ್ ಆಗೋದಕ್ಕೆ ಇಷ್ಟ – ದಿನೇಶ್ ಗುಂಡೂರಾವ್ ವ್ಯಂಗ್ಯ

Public TV
1 Min Read
UMESH KATTI DINESH GUNDU RAO

– ರಮೇಶ್ ಜಾರಕಿಹೊಳಿ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ

ಬೆಂಗಳೂರು: ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರಿಗೆ ಟಿವಿಗಳಲ್ಲಿ ಹೆಡ್‍ಲೈನ್ ಆಗುವುದಕ್ಕೆ ಇಷ್ಟ. ಹೀಗಾಗಿ 24 ಗಂಟೆಯಲ್ಲಿ ಸರ್ಕಾರ ಬೀಳುತ್ತದೆ ಅಂತ ಹೇಳಿಕೆ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಉಮೇಶ್ ಕತ್ತಿ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ ದಿನೇಶ್ ಗುಂಡೂರಾವ್, ಶಾಸಕರು ಸುದ್ದಿಯಾಗುತ್ತಿರಲಿಲ್ಲ. ಹೀಗಾಗಿ ಸರ್ಕಾರ ಬೀಳುತ್ತದೆ ಅಂತಾ ಹೇಳಿಕೆ ಕೊಟ್ಟರೆ ಒಂದು ದಿನ ಸುದ್ದಿಯಾಗಬಹುದೆಂದು ಪ್ಲಾನ್ ಮಾಡಿದ್ದರು. ಶಾಸಕರು ಹೇಳಿಕೆ ಕೊಟ್ಟು 24 ಗಂಟೆ ಕಳೆದಿದ್ದು, ಮೈತ್ರಿ ಸರ್ಕಾರ ಸುಭದ್ರವಾಗಿದೆ. ಈಗ ಉಮೇಶ್ ಕತ್ತಿ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು ಎಂದು ಕಿಡಿಕಾರಿದರು.

RAMESH

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಲ್ಲಿಯೂ ಹೋಗಲ್ಲ. ಗೋಕಾಕ್‍ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ರಮೇಶ್ ಜಾರಕಿಹೊಳಿ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಕೇವಲ ಆಪ್ತರೊಂದಿಗೆ ಮಾತ್ರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ಶಕ್ತಿ ಯೋಜನೆ:
ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಉದ್ದೇಶದಿಂದ ಎಐಸಿಸಿ ಜಾರಿಗೆ ತಂದ ಶಕ್ತಿ ಯೋಜನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಈ ಯೋಜನೆ ಅಡಿ ಅನೇಕರು ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ರಾಜ್ಯದಲ್ಲಿ 10.50 ಲಕ್ಷ ಜನರು ಸದಸ್ಯತ್ವಕ್ಕೆ ನೋಂದಣಿ ಪಡೆದಿದ್ದಾರೆ. ಶಕ್ತಿ ಯೋಜನೆಯಲ್ಲಿ ಯಾವುದೇ ಗೋಲ್‍ಮಾಲ್ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

Dinesh Gundurao

ಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಪ್ರಚಾರ ಮಡಲಾಗಿದೆ. ಸದಸ್ಯರ ನೋಂದಣಿಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದರೆ, ರಾಜಸ್ತಾನ ಎರಡನೇ ಸ್ಥಾನದಲ್ಲಿದೆ. ರಾಜ್ಯದ 7 ವಿಧಾನಸಭಾ ಕ್ಷೇತ್ರಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ಬೆಂಗಳೂರಿನ ಯಶವಂತಪುರ ಕ್ಷೇತ್ರವೊಂದರಲ್ಲಿಯೇ 1.12 ಲಕ್ಷ ಜನರು ಶಕ್ತಿ ಯೋಜನೆ ಮೂಲಕ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article