– ಮಾ.16 ರಂದು ಪಟ್ಟಿ ಅಂತಿಮ
– ಪಟ್ಟಿಯಲ್ಲಿ ಸಣ್ಣಪುಟ್ಟ ಬದಲಾವಣೆ ಆಗಬಹುದು
– ಮೋದಿ, ಹೆಗ್ಡೆಯನ್ನು ಸೋಲಿಸಿ: ಮಾರ್ಗರೇಟ್ ಆಳ್ವಾ
ಬೆಂಗಳೂರು: ತುಮಕೂರು ಸೇರಿದಂತೆ ಹಾಲಿ ಕಾಂಗ್ರೆಸ್ ನಾಯಕರು ಇರುವ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟು ಕೊಡದಿರಲು ಕಾಂಗ್ರೆಸ್ ತೀರ್ಮಾನ ತೆಗೆದುಕೊಂಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ತುಮಕೂರು ಸೇರಿದಂತೆ ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡಬಾರದು ಎನ್ನುವ ತೀರ್ಮಾನಕ್ಕೆ ಬಂದಿದ್ದೇವೆ. ಸೀಟು ಹಂಚಿಕೆ ವಿಚಾರದಲ್ಲಿ ಯಾರಲ್ಲೂ ವೈಯಕ್ತಿಕ ಪ್ರತಿಷ್ಠೆ ಇಲ್ಲ. ಎಲ್ಲ ಸಮಸ್ಯೆಯು ಪರಿಹಾರವಾಗುತ್ತದೆ. ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ಹಾಲಿ ಸಂಸದರಿದ್ದಾರೆ. ಹೀಗಾಗಿ ಜೆಡಿಎಸ್‍ಗೆ ಬಿಟ್ಟುಕೊಡಲು ತೀರ್ಮಾನ ಮಾಡಲಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್‍ನಲ್ಲಿ ಸ್ಥಳೀಯವಾಗಿ ಕೆಲ ಭಿನ್ನಾಭಿಪ್ರಾಯಗಳಿವೆ. ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದರು.
Advertisement
Advertisement
ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಾಳೆ ಸ್ಥಳೀಯ ಮುಖಂಡರ ಸಭೆ ನಡೆಯಲಿದೆ. ಈ ವೇಳೆ ಜಿಲ್ಲಾ ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಪಡೆಯುತ್ತೇವೆ. ಯಾರು ಸ್ಪರ್ಧೆ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ಮಾಡುತ್ತೇವೆ.
Advertisement
ಮಾಜಿ ಸಚಿವ ಅಂಬರೀಶ್ ಅವರ ಬಗ್ಗೆ ಅಪಾರ ಗೌರವವಿದೆ. ಸುಮಲತಾ ಅವರ ಬಗ್ಗೆ ಅನುಕಂಪವಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಅವರಿಗೆ ಮಂಡ್ಯದಲ್ಲಿ ನಮ್ಮ ಪಕ್ಷದಿಂದ ಅವಕಾಶ ಮಾಡಿ ಕೊಡುವುದಕ್ಕೆ ಆಗುವುದಿಲ್ಲ. ಅಭಿಷೇಕ್ ಹಾಗೂ ಸುಮಲತಾ ಅವರು ರಾಜಕೀಯವಾಗಿ ಬೆಳೆಯಲು ಇಚ್ಛಿಸಿದರೆ ಖಂಡಿತವಾಗಿಯೂ ಕಾಂಗ್ರೆಸ್ ಅವಕಾಶ ಮಾಡಿಕೊಡುತ್ತದೆ. ಆದರೆ ಈ ಬಾರಿ ಮಂಡ್ಯದಲ್ಲಿ ಅವಕಾಶ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಸ್ಕ್ರಿನಿಂಗ್ ಕಮಿಟಿ ಸಭೆ ನಡೆದಿದ್ದು, ಅಂತಿಮ ಪಟ್ಟಿ ಸಿದ್ಧಪಡಿಸಿಕೊಂಡಿದ್ದೇವೆ. ಸೆಂಟ್ರಲ್ ಎಲೆಕ್ಷನ್ ಸಮಿತಿಯ ಸಭೆ ಇದೇ ತಿಂಗಳ 16ರಂದು ನಡೆಯಲಿದೆ. ಈ ಸಭೆಯಲ್ಲಿ ಎಲ್ಲವೂ ಅಂತಿಮವಾಗುತ್ತದೆ. ಮೈತ್ರಿ ಮಾಡಿಕೊಳ್ಳುವ ಕ್ಷೇತ್ರಗಳಲ್ಲಿ ಯಾವುದೇ ಸಮಸ್ಯೆ ಆಗಲ್ಲ. ಅಂತಿಮ ಪಟ್ಟಿಯಲ್ಲಿ ಜೆಡಿಎಸ್‍ಗೆ ಎಷ್ಟು ಕ್ಷೇತ್ರ ಬಿಟ್ಟು ಕೊಟ್ಟಿದ್ದೇವೆಂದು ಈಗಲೇ ಹೇಳುವುದಿಲ್ಲ. ಕೊನೆಯ ಕ್ಷಣದಲ್ಲಿ ಸಣ್ಣ ಪುಟ್ಟ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕಲಬುರಗಿಯಲ್ಲಿ ಮಾರ್ಚ್ 18ರಂದು ನಡೆಯಲಿರುವ ಪರಿವರ್ತನಾ ರ್ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲೂ ಕಾರ್ಯಕ್ರಮ ಆಯೋಜನೆ ಮಾಡಲು ಪ್ಲಾನ್ ನಡೆಯುತ್ತಿದೆ ಎಂದರು.
ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಅವರನ್ನು ಸೋಲಿಸಬೇಕು. ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಹಾಳು ಮಾಡುತ್ತಾರೆ. ಅವರು ಧರ್ಮ, ರಾಜಕೀಯ, ಭಾಷೆಯನ್ನು ಹಳಿ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು. ಮೋದಿ ಜೈ ಜೈ ಅಂದರೆ ಮಾತ್ರ ದೇಶಪ್ರೇಮಿಗಳು ಎನ್ನುವಂತೆ ಬಿಂಬಿಸಲಾಗುತ್ತಿದೆ. ನಾವೆಲ್ಲರೂ ಒಟ್ಟಾಗಬೇಕಿದೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಅಧಿಕಾರಕ್ಕೆ ಬಂದು ಐದು ವರ್ಷ ಆಡಳಿತ ಮಾಡಿದರೂ ಯಾಕೆ ಬಿಜೆಪಿ ರಾಮಮಂದಿರ ನಿರ್ಮಾಣ ಮಾಡಲಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಮ ನೆನಪಾಗಿದ್ದಾನೆ ಎಂದು ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾರ್ಗರೇಟ್ ಆಳ್ವಾ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಪಕ್ಷದ ವರಿಷ್ಠರು ಬೀದರ್ ನಲ್ಲಿ ಯಾರು ಪ್ರಬಲರಾಗಿದ್ದಾರೆ ಎನ್ನುವುದನ್ನು ಗಮನ ಹರಿಸಿದ್ದಾರೆ. ಹೈಕಮಾಂಡ್ ನನಗೆ ಅವಕಾಶ ನೀಡಿದರೆ ಸ್ಪರ್ಧಿಸುತ್ತೇನೆ. ಮೈಸೂರು ಕ್ಷೇತ್ರದ ವಿಚಾರದಲ್ಲಿ ಗೊಂದಲವಿಲ್ಲ. ಎಲ್ಲವೂ ಊಹಾಪೋಹಗಳು, ಸತ್ಯಾಂಶ ಬೇರೆಯದೇ ಇದೆ. ಎರಡೂ ಪಕ್ಷದ ಮುಖಂಡರು ಕೂತು ಚರ್ಚೆ ಮಾಡಿದ್ದಾರೆ. ಕೊನೆ ಹಂತದಲ್ಲಿ ಗೀವ್ ಆಂಡ್ ಟೇಕ್ ಪಾಲಿಸಿ ಇದ್ದೇ ಇರುತ್ತದೆ. ಒಂದೇರಡು ಸೀಟು ಹಂಚಿಕೆ ಆಚೀಚೆ ಆಗಬಹುದು ಅಷ್ಟೇ ಹೊರತು ಮೈತ್ರಿ ಗಟ್ಟಿಯಾಗಿದೆ ಎಂದು ತಿಳಿಸಿದರು.
ಎಷ್ಟು ಸೀಟು ಎಂಬ ಬಗ್ಗೆ ನಾನು ಈಗಲೇ ಹೇಳುವುದಕ್ಕೆ ಆಗುವುದಿಲ್ಲ. ಮಂಡ್ಯದಲ್ಲಿ ಪಕ್ಷದ ಹಿತದೃಷ್ಟಿಯಿಂದ ಯಾರೂ ಹೇಳಿಕೆಗಳನ್ನು ನೀಡಬೇಡಿ ಎಂದು ಪಕ್ಷದ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಮಂಡ್ಯದಲ್ಲೂ ಒಗ್ಗಟ್ಟಿನಿಂದಲೇ ಕೆಲಸ ಮಾಡುತ್ತೇವೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv