ಯಶ್ ಮುಂದಿನ ಸಿನಿಮಾ ಬಗ್ಗೆ ಏನೆಲ್ಲ ಸುದ್ದಿಗಳು ಹರಡಿದರೂ, ಅವರು ಮಾತ್ರ ಯಾವುದೇ ಮಾಹಿತಿ ಕೊಡದೇ ಕುತೂಹಲದ ಮೇಲೆ ಕುತೂಹಲ ಹುಟ್ಟಿಸುತ್ತಿದ್ದಾರೆ. ಮುಂದಿನ ಚಿತ್ರವನ್ನು ಅವರು ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಜೊತೆ ಮಾಡುವುದು ಪಕ್ಕಾವಾದರೂ, ಅಧಿಕೃತವಾಗಿ ಅವರು ಯಾವುದೇ ಮಾಹಿತಿ ನೀಡಿಲ್ಲ. ಈ ಸಿನಿಮಾದ ನಿರ್ಮಾಪಕರು ಕೆವಿಎನ್ ಪ್ರೊಡಕ್ಷನ್ ಎಂದು ಗೊತ್ತಾಗಿದ್ದರೂ, ಅವರು ಕೂಡ ಮಾಹಿತಿ ಬಿಟ್ಟು ಕೊಡುತ್ತಿಲ್ಲ.
ಈ ಮಧ್ಯೆ ತೆಲುಗು ಸಿನಿಮಾ ರಂಗದಿಂದ ಮತ್ತೊಂದು ಖಡಕ್ ಸುದ್ದಿ ಬಂದಿದೆ. ದಕ್ಷಿಣದ ಖ್ಯಾತ ನಿರ್ಮಾಪಕ, ಬಹುಕೋಟಿ ಬಜೆಟ್ ಸಿನಿಮಾ ಮಾಡುವ ದಿಲ್ ರಾಜು ಅವರು ಯಶ್ ಗಾಗಿ ಒಂದು ಸಿನಿಮಾ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಈ ಸಿನಿಮಾವನ್ನು ತೆಲುಗು ನಿರ್ದೇಶಕರೇ ನಿರ್ದೇಶನ ಮಾಡಿದರೂ, ಅದೊಂದು ಪ್ಯಾನ್ ಇಂಡಿಯಾ ಸಿನಿಮಾವಂತೆ. ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಯಶ್ ಅವರಿಗೆ ದಿಲ್ ರಾಜು 100 ಕೋಟಿ ರೂಪಾಯಿ ಸಂಭಾವನೆಯ ಆಫರ್ ನೀಡಿದ್ದಾರಂತೆ. ಇದನ್ನೂ ಓದಿ: ಹಿರಿಯನಟ ರೈ ಮೋಹನ್ ಶವವಾಗಿ ಮನೆಯಲ್ಲಿ ಪತ್ತೆ
ಈ ಹಿಂದೆಯೂ ಕೂಡ ಯಶ್ ಅವರು ನೂರಾರು ಕೋಟಿ ರೂಪಾಯಿಯ ಬಾಲಿವುಡ್ ಆಫರ್ ತಿರಸ್ಕರಿಸಿದರು ಎಂಬ ಸುದ್ದಿ ಹರಿದಾಡುತ್ತಿತ್ತು. ಆ ಪ್ರಮಾಣದ ಸಿನಿಮಾವನ್ನು ಅವರು ಬಿಡಲು ಕಾರಣ ಏನು? ಎಂಬ ಪ್ರಶ್ನೆ ಕೂಡ ಮೂಡಿತ್ತು. ಈಗ ಮತ್ತೆ ನೂರು ಕೋಟಿ ರೂಪಾಯಿ ಸಂಭಾವನೆ ವಿಚಾರ ಮುನ್ನೆಲೆಗೆ ಬಂದಿದೆ. ಅಂದುಕಂಡಂತೆ ಆದರೆ, ದಕ್ಷಿಣದಲ್ಲೇ ಈ ಪ್ರಮಾಣದಲ್ಲಿ ಸಂಭಾವನೆ ಪಡೆಯುವ ಬೆರಳಣಿಕೆಯ ನಟರಲ್ಲಿ ಯಶ್ ಕೂಡ ಒಬ್ಬರಾಗಲಿದ್ದಾರೆ. ಆದರೆ, ನರ್ತನ್ ಸಿನಿಮಾವಾದ ನಂತರ ದಿಲ್ ರಾಜು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.