– ರಾಹುಲ್ ಗಾಂಧಿ, ಪ್ರಿಯಾಂಕಾ, ಖರ್ಗೆ, ಮೋದಿಗೂ ಪೋಸ್ಟ್ ಟ್ಯಾಗ್
– ದಿಗ್ವಿಜಯ್ ಪೋಸ್ಟ್‌ಗೆ ಬಿಜೆಪಿ ಮೆಚ್ಚುಗೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ಹೊಗಳಿದ್ದ ಶಶಿತರೂರ್ ಕಾಂಗ್ರೆಸ್‌ನಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಈಗ ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಸರದಿ. ಬಹಿರಂಗವಾಗಿ ಬಿಜೆಪಿ, ಆರ್‌ಎಸ್‌ಎಸ್ (BJP, RSS) ಸಂಘಟನಾ ಕೌಶಲ್ಯವನ್ನು ಹೊಗಳಿ ವಿವಾದ ಮೈಮೇಲೆಳೆದುಕೊಂಡಿದ್ದಾರೆ.
ಪಕ್ಷದಲ್ಲಿನ ಆಂತರಿಕ ಸುಧಾರಣೆಗಳ ಅಗತ್ಯವನ್ನ ರಾಹುಲ್ ಗಾಂಧಿಗೆ ಸೂಚಿಸಿದ ಒಂದು ವಾರದ ನಂತರ ದಿಗ್ವಿಜಯ ಸಿಂಗ್ (Digvijaya Singh) ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಗುಜರಾತ್‌ನಲ್ಲಿ (Gujarat) ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಧುರೀಣ ಎಲ್.ಕೆ ಅಡ್ವಾಣಿ ಎದುರು ನರೇಂದ್ರ ಮೋದಿ ನೆಲದ ಮೇಲೆ ಕುಳಿತಿರುವುದನ್ನು ತೋರಿಸುವ ಫೋಟೋವನ್ನ ಪೋಸ್ಟ್ ಮಾಡಿದ್ದಾರೆ. ಇದು 1990ರ ದಶಕದ ನರೇಂದ್ರ ಮೋದಿಯವರ ಬ್ಲ್ಯಾಕ್ ಅಂಡ್ ವೈಟ್ ಫೋಟೋ ಆಗಿದೆ.
ಇದೇ ವೇಳೆ ವಿವಿಧ ವಿಷಯಗಳ ಕುರಿತು ಕಾಂಗ್ರೆಸ್ ಪಕ್ಷವನ್ನ ಗುರಿಯಾಗಿಸಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಹೊಗಳಿದ್ದಾರೆ. ಅಡ್ವಾಣಿ ಮುಂದೆ ನೆಲದ ಮೇಲೆ ಕುಳಿತ ಮೋದಿ ಬಗ್ಗೆ ಉಲ್ಲೇಖಿಸಿ, ಒಮ್ಮೆ ನೆಲದ ಮೇಲೆ ಕುಳಿತಿದ್ದ ತಳಮಟ್ಟದ ಕಾರ್ಯಕರ್ತರು ಸಂಘ-ಬಿಜೆಪಿ ಪರಿಸರ ವ್ಯವಸ್ಥೆಯೊಳಗೆ ಹೇಗೆ ಬೆಳೆದು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಬಹುದು ಎಂಬುದನ್ನು ಶ್ಲಾಘಿಸಿದ್ದಾರೆ.
ಆರ್‌ಎಸ್‌ಎಸ್ ಸಂಘಟನಾ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕೊನೆಯಲ್ಲಿ ಜೈ ಶ್ರೀರಾಮ್ ಎಂದು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಪೋಸ್ಟ್ ಅನ್ನು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡ ಬಿಜೆಪಿ, ಇದು ಕಾಂಗ್ರೆಸ್‌ನಲ್ಲಿ ಸಾಧ್ಯವೇ..? ಅಂತ ದಿಗ್ವಿಜಯ್ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

