– ಕರ್ನಾಟಕದಲ್ಲೂ ಇದೆ ವಂಚಕರ ನೆಟ್‌ವರ್ಕ್
– ವಿಚಾರಣೆಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಸತ್ಯ
ಬೆಂಗಳೂರು: ದೇಶಾದ್ಯಂತ ಭಾರೀ ಆತಂಕ ಸೃಷ್ಟಿಸಿರುವ ಡಿಜಿಟಲ್ ಅರೆಸ್ಟ್ (Digital Arrest) ಹೆಸರಿನಲ್ಲಿ ವೃದ್ಧರು, ನಿವೃತ್ತ ಹಿರಿಯ ಅಧಿಕಾರಿಗಳು ಹಾಗೂ ಶ್ರೀಮಂತರನ್ನೇ ಟಾರ್ಗೆಟ್ ಮಾಡಿ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದ್ದ ಅಂತರರಾಜ್ಯ ಸೈಬರ್ ವಂಚಕರ ಬೃಹತ್ ಜಾಲವನ್ನು ಬೆಂಗಳೂರು ಸಿಸಿಬಿ (CCB) ಸೈಬರ್ ಕಮಾಂಡ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಬೆಂಗಳೂರಿನ ಶಿವಾಜಿನಗರದ ವೃದ್ಧ ಮಹಿಳೆಯೊಬ್ಬರಿಗೆ ಐಷಾರಾಮಿ ಡಿಜಿಟಲ್ ಜಾಲ ಹೆಣೆದು ಬರೋಬ್ಬರಿ 24 ಕೋಟಿ ರೂಪಾಯಿ ದೋಚಿದ್ದ ಈ ಗ್ಯಾಂಗ್‌ನ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಓಂಪ್ರಕಾಶ್, ಗೌರವ್, ಶಿವಗ್ಗಾನವ್, ಅಕ್ಕಚ್ ಮಲ್ಲಿಕ್, ಪಾಲಕ್ ಭಾಯಿ ಪಟೇಲ್, ಅಮಿತ್ ನರೇಂದ್ರ ಪಟೇಲ್, ಓಂ ಪ್ರಕಾಶ್ ರಜಪೂತ್, ಗೌರವ್ ಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತರ ತನಿಖೆಯ ವೇಳೆ ಬೆಚ್ಚಿ ಬೀಳಿಸುವ ಅಂಶ ಹೊರಬಿದ್ದಿದೆ.
ಗುರುಗ್ರಾಮದಲ್ಲಿ ಕಚೇರಿ
ಬಂಧಿತ ಆರೋಪಿಗಳು ಹರಿಯಾಣದ ಗುರುಗ್ರಾಮದಲ್ಲಿ ಹೈಟೆಕ್ ಕಚೇರಿಯೊಂದನ್ನು ತೆರೆದು, ಅಲ್ಲಿಂದಲೇ ಇಡೀ ದೇಶಾದ್ಯಂತ ತಮ್ಮ ಸೈಬರ್ ಕರಾಳ ಜಾಲವನ್ನು ನಿಯಂತ್ರಿಸುತ್ತಿದ್ದರು. ಸಾರ್ವಜನಿಕರಿಗೆ ಸಿಬಿಐ (CBI), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಥವಾ ಮುಂಬೈ ಪೊಲೀಸರ ಹೆಸರಿನಲ್ಲಿ ವಿಡಿಯೋ ಕರೆ ಮಾಡುತ್ತಿದ್ದ ಈ ವಂಚಕರು, “ನಿಮ್ಮ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆ ಅಥವಾ ಡ್ರಗ್ಸ್ ಪಾರ್ಸೆಲ್ ಬಂದಿದೆ. ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ” ಎಂದು ಹೆದರಿಸುತ್ತಿದ್ದರು. ಇದನ್ನೂ ಓದಿ: ನಕಲಿ ಸುಪ್ರೀಂ ಆದೇಶ ನೀಡಿ ಪರಪ್ಪನ ಅಗ್ರಹಾರ ಜೈಲಿಂದ ಪರಾರಿ – 8 ವರ್ಷಗಳ ಬಳಿಕ ಖದೀಮನ ಕೃತ್ಯ ಬಯಲು
ಕಾನೂನಿನ ಅರಿವಿಲ್ಲದ ಜನರನ್ನು ದಿನಗಟ್ಟಲೆ ವಿಡಿಯೋ ಕಾಲ್‌ನಲ್ಲೇ ಇರುವಂತೆ ಮಾಡಿ ‘ಡಿಜಿಟಲ್ ಅರೆಸ್ಟ್’ ಮುಖೇನ ಕೋಣೆಯೊಂದರಲ್ಲೇ ಬಂಧಿಯಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಬಳಿಕ ಕೇಸ್‌ನಿಂದ ಮುಕ್ತಿ ಕೊಡಿಸುವುದಾಗಿ ನಂಬಿಸಿ ಬ್ಯಾಂಕ್ ಖಾತೆಗಳಲ್ಲಿದ್ದ ಕೋಟ್ಯಂತರ ರೂಪಾಯಿ ಹಣವನ್ನು ದೋಚುತ್ತಿದ್ದರು.
ಸಾಮಾಜಿಕ ಜಾಲತಾಣ ಹ್ಯಾಕ್ ಮಾಡಿ ಮೊಬೈಲ್ ನಂಬರ್ ಪಡೆದು ವಿವಿಧ ಬ್ಯಾಂಕ್‌ಗಳ ಮೂಲಕ ಅಕ್ರಮವಾಗಿ ಮಾಹಿತಿ (Data) ಸಂಗ್ರಹಿಸುತ್ತಿದ್ದ ಈ ಗ್ಯಾಂಗ್, ಕೋಟ್ಯಂತರ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ನಿವೃತ್ತ ಹಿರಿಯ ಅಧಿಕಾರಿಗಳು ಹಾಗೂ ಒಂಟಿ ವೃದ್ಧರನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡುತ್ತಿತ್ತು.
ಸಂತ್ರಸ್ತರಿಂದ ಹಣ ಖಾತೆಗೆ ಜಮೆಯಾಗುತ್ತಿದ್ದಂತೆ, ಕೇವಲ ಕೆಲವೇ ನಿಮಿಷಗಳಲ್ಲಿ ಆ ಹಣವನ್ನು ಬೇರೆ ಬೇರೆ ರಾಜ್ಯಗಳ 20ಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳಿಗೆ (ಬಾಡಿಗೆ ಬ್ಯಾಂಕ್ ಖಾತೆಗಳು) ವರ್ಗಾವಣೆ ಮಾಡಿ ಎಸ್ಕೇಪ್ ಮಾಡುತ್ತಿದ್ದರು. ಇದನ್ನೂ ಓದಿ: ವೃದ್ಧೆಗೆ ಡಿಜಿಟಲ್ ಅರೆಸ್ಟ್ – ಬರೋಬ್ಬರಿ 24 ಕೋಟಿ ರೂ. ದೋಚಿದ ಸೈಬರ್ ವಂಚಕರು
60 ಲಕ್ಷ ರೂ. ಫ್ರೀಜ್:
ದೇಶದ ಹಲವು ರಾಜ್ಯಗಳಲ್ಲಿ ನಡೆದಿರುವ ಹತ್ತಾರು ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಇದೇ ಗ್ಯಾಂಗ್ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಸದ್ಯಕ್ಕೆ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಸಿಸಿಬಿ ಸೈಬರ್ ಪೊಲೀಸರು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಸುಮಾರು 60 ಲಕ್ಷ ರೂಪಾಯಿ ನಗದು ಹಣವನ್ನು ಫ್ರೀಜ್ ಮಾಡಿದ್ದಾರೆ. ಈ ಜಾಲದ ಹಿಂದೆ ಇನ್ನೂ ದೊಡ್ಡ ತಲೆಗಳು ಅಡಗಿರುವ ಶಂಕೆಯಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಹರಿಯಾಣ ಮತ್ತು ದೆಹಲಿ ಭಾಗಗಳಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
