ನವದೆಹಲಿ: ನಾವು ಯಾರ ಜೊತೆಗೂ ರಾಜಿ ಮಾಡಿಕೊಂಡಿಲ್ಲ, ಹೋರಾಟದಿಂದ ಹಿಂದೆಯೂ ಸರಿಯುವುದಿಲ್ಲ, ನ್ಯಾಯಕ್ಕಾಗಿ ಒಗ್ಗಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ, ನಮ್ಮನ್ನು ದುರ್ಬಲಗೊಳಿಸಲು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಸಾಕ್ಷಿ ಮಲಿಕ್ (Sakshi Malik) ಹಾಗೂ ಅವರ ಪತಿ, ಕುಸ್ತಿಪಟು ಸತ್ಯವರ್ತ್ ಕಡಿಯಾನ್ (Satyawart Kadian) ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಜೊತೆಗೆ ಸಭೆ ನಡೆಸಿದ ಬೆನ್ನಲ್ಲೇ ಭಾರತೀಯ ಕುಸ್ತಿ ಫೆಡರೇಷನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ (Brij Bhushan Sharan Singh)
ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪ್ರಮುಖ ಕುಸ್ತಿಪಟುಗಳಲ್ಲಿ ಒಬ್ಬರಾದ ಸಾಕ್ಷಿ ಮಲಿಕ್ ಹೋರಾಟದಿಂದ ಹಿಂದೆ ಸರಿದಿದ್ದು, ತಮ್ಮ ಕೆಲಸಕ್ಕಾಗಿ ರೈಲ್ವೇ ಇಲಾಖೆಗೆ (Railway Department) ಮರಳಿದ್ದಾರೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಪ್ರತಿಭಟನೆಯಿಂದ ಹಿಂದೆ ಸರಿದ ಕುಸ್ತಿಪಟುಗಳು – ಮರಳಿ ರೈಲ್ವೇ ಉದ್ಯೋಗಕ್ಕೆ
ಈ ವರದಿ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಾಕ್ಷಿ ಮಲಿಕ್ ಪತಿ, ಕುಸ್ತಿಪಟು ಸತ್ಯವರ್ತ್ ಕಡಿಯಾನ್ ಹೋರಾಟ ಹಿಂದಕ್ಕೆ ಪಡೆದಿರುವುದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಹೋರಾಟ ಮುಂದುವರಿಯಲಿದ್ದು, ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ- ಪತ್ರದ ಮೂಲಕ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ
ಟ್ವಿಟ್ಟರ್‌ನಲ್ಲಿ (Twitter) ಈ ಬಗ್ಗೆ ಖುದ್ದು ಸಾಕ್ಷಿ ಮಲಿಕ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ಹೋರಾಟದಿಂದ ಹಿಂದೆ ಸರಿದಿರುವ ಸುದ್ದಿ ಸಂಪೂರ್ಣ ತಪ್ಪು. ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟದಿಂದ ನಾವು ಹಿಂದೆ ಸರಿದಿಲ್ಲ, ನಾವೂ ಹಿಂದೆ ಸರಿಯುವುದೂ ಇಲ್ಲ. ಸತ್ಯಾಗ್ರಹದ ಜೊತೆಗೆ ರೈಲ್ವೇಯಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ದಯವಿಟ್ಟು ಯಾವುದೇ ತಪ್ಪು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ, ತನ್ನದೇ ಆದ ಕ್ರಮ ತೆಗೆದುಕೊಳ್ಳಲಿ- ಕುಸ್ತಿಪಟುಗಳಿಗೆ ಅಮಿತ್ ಶಾ ಭರವಸೆ