ಬಾಗಲಕೋಟೆ: ಘಟಪ್ರಭಾ ಪ್ರವಾಹಕ್ಕೆ ಬಾಗಲಕೋಟೆ ನಲುಗಿ ಹೋಗಿದ್ದು, ಮನೆಗಳಿಲ್ಲದೇ ಡವಳೇಶ್ವರ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಡವಳೇಶ್ವರ ಗ್ರಾಮ ಕೃಷ್ಣ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ನಲುಗಿ ಹೋಗಿದೆ. ಪ್ರವಾಹದಲ್ಲಿ ಸಿಲುಕಿ ಅನೇಕ ಗ್ರಾಮಸ್ಥರು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅದರಲ್ಲೂ ಘಟಪ್ರಭಾ ನದಿ ಪ್ರವಾಹ ಮಾಡಿರುವ ಹಾನಿಯಂತೂ ಹೇಳತೀರದು. ಇದರಲ್ಲಿ ಡವಳೇಶ್ವರ ಗ್ರಾಮವೂ ಒಂದು. ಘಟಪ್ರಭಾ ನದಿ ಪ್ರವಾಹಕ್ಕೆ ಮೊದಲು ಜಲಾವೃತವಾಗುವ ಗ್ರಾಮ ಇದಾಗಿದೆ.
Advertisement
Advertisement
ಈ ವರ್ಷದ ಪ್ರವಾಹದಿಂದ ಧರೆಗುರುಳಿದ ನೂರಾರು ಮನೆಗಳು ಅವಶೇಷಗಳ ರೂಪ ಪಡೆದುಕೊಂಡಿವೆ. ಇವುಗಳಿಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಜೊತೆಗೆ ನೋಡುವುದಕ್ಕೆ ಚೆನ್ನಾಗಿಯೇ ಕಾಣುವ ಕೆಲ ಮನೆಗಳು ಬಿರುಕು ಬಿಟ್ಟಿದ್ದು ಆ ಮನೆಯಲ್ಲಿ ವಾಸ ಮಾಡುವುದೆಂದರೆ ಜವರಾಯನಿಗೆ ಕೈಬೀಸಿ ಕರೆದಂತೆ. ಮತ್ತೆ ಮತ್ತೆ ಪ್ರವಾಹ, ಮತ್ತೆ ಮತ್ತೆ ಸಂಕಷ್ಟದಲ್ಲಿ ದಿನ ದೂಡುವುದಕ್ಕಿಂತ ಒಮ್ಮೆ ಇಡೀ ಗ್ರಾಮವನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕು ಎನ್ನುವುದು ಸಂತ್ರಸ್ತರ ಒತ್ತಾಯವಾಗಿದೆ.
Advertisement
Advertisement
ಈ ಬಾರಿ ಪ್ರವಾಹ ಬಂದಾಗ ಇಲ್ಲಿನ ಜನರು ರಾತ್ರೋರಾತ್ರಿ ಊರನ್ನು ಬಿಟ್ಟು ಸುರಕ್ಷತಾ ಸ್ಥಳಗಳಿಗೆ ತೆರಳಿದ್ದರು. ನೀರು ಸರಿದ ನಂತರ ಮತ್ತೆ ವಾಪಸ್ ಬರುವಷ್ಟರಲ್ಲಿ ಗ್ರಾಮದ ಅನೇಕ ಮನೆಗಳು ನೆಲಸಮವಾಗಿದ್ದವು. ಗಾಯದ ಮೇಲೆ ಬರೆ ಎನ್ನುವಂತೆ ಬೆಳೆಗಳು ಜಲಾವೃತವಾಗಿ ಸಾಕಷ್ಟು ಹಾನಿ ಉಂಟಾಗಿದೆ. 2019ರ ಶತಮಾನದ ಪ್ರವಾಹ ಇವರ ಬದುಕನ್ನೇ ಕಸಿದುಕೊಂಡಿದೆ. ನೂರಾರು ಮನೆಗಳು ನೆಲ ಕಚ್ಚಿವೆ. ಗ್ರಾಮದಲ್ಲಿ ನೆಲೆಸುವ ಆಶಾಭಾವನೆಯನ್ನು ಕಿತ್ತುಕೊಂಡಿದೆ. ಈ ಗ್ರಾಮದಲ್ಲಿ ಇಲ್ಲಿವರೆಗೆ 900 ಮನೆಗಳಲ್ಲಿ ಕೇವಲ 295 ಮನೆಗಳನ್ನು ಸ್ಥಳಾಂತರ ಮಾಡಲಾಗಿದೆ. ಆದರೆ ಗ್ರಾಮಸ್ಥರು ನಮ್ಮ ಇಡೀ ಗ್ರಾಮವನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕು ಎಂದು ಹೇಳುತ್ತಿದ್ದಾರೆ.
ಇತ್ತೀಚೆಗೆ ಬಂದ ಪ್ರವಾಹದಿಂದಾಗಿ ಬೆಳೆಗಳು ಕೊಚ್ಚಿ ಹೋಗಿವೆ. ಅಳಿದ ಕಡೆಗೆ ಹಸಿ ಮೇವು ತಂದು ಜಾನುವಾರುಗಳಿಗೆ ಹಾಕುತ್ತಿದ್ದರು. ಆದರೆ ಇತ್ತೀಚೆಗೆ ಉಕ್ಕಿದ ನದಿಯ ಜೊತೆ ಚಿತ್ತಿ ಮತ್ತು ಸ್ವಾತಿ ಮಳೆಗಳು ಕೈ ಜೋಡಿಸಿದ್ದರಿಂದ ಜಾನುವಾರುಗಳಿಗೆ ಮೇವು ಸಿಗದಂತಾಗಿದೆ. ತಮ್ಮ ಬದುಕು ಅತಂತ್ರವಾಗಿರುವಾಗ ಇನ್ನು ಜಾನುವಾರುಗಳಿಗೆ ಮೇವು ತರುವುದು ಎಲ್ಲಿಂದ ಎನ್ನುವ ಪ್ರಶ್ನೆ ಅಲ್ಲಿನ ಜನರನ್ನು ಕಾಡುತ್ತಿದೆ. ಸರ್ಕಾರದಿಂದ ತಾತ್ಕಾಲಿಕ ಹತ್ತು ಸಾವಿರ ರೂ. ಪರಿಹಾರ ಬಿಟ್ಟರೆ ಉಳಿದ ಯಾವುದೇ ನೆರವು ಈವರೆಗೂ ಇವರಿಗೆ ಬಂದಿಲ್ಲ.