– ಆಸ್ಪತ್ರೆಯಲ್ಲೇ ಚೂರಿ ಇರಿತ
ಧಾರವಾಡ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಲು ಹೋಗಿದ್ದ ವೃದ್ಧ ಕೊಲೆಯಾದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಫಕ್ರುದ್ದೀನ್ ನದಾಫ್(56) ಎಂಬಾತ ನವಲಗುಂದ ಪಟ್ಟಣದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದನು.
ಅತ್ಯಾಚಾರಕ್ಕೆ ಯತ್ನಿಸಿದ್ದನ್ನು ನೋಡಿದ್ದ ಜನರು ಫಕ್ರುದ್ದೀನ್ ನನ್ನು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದರು. ಥಳಿತಕ್ಕೊಳಗಾಗಿ ಗಾಯಗೊಂಡಿದ್ದ ಫಕ್ರುದ್ದೀನ್ ನನ್ನು ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಹೀಗೆ ಆಸ್ಪತ್ರೆಯ ಬೆಡ್ ನಲ್ಲಿ ಮಲಗಿದ್ದಾಗ ಅತ್ಯಾಚಾರ ಪ್ರಕರಣದ ಬಾಲಕಿ ಸಂಬಂಧಿ ಭಾನುವಾರ ಮಧ್ಯಾಹ್ನ ಫಕ್ರುದ್ದೀನ್ ಮೇಲೆ ಚಾಕುವಿನಿಂದ ಇರಿದು ಮತ್ತೆ ಗಂಭೀರ ಗಾಯಗೊಳಿಸಿದ್ದಾನೆ.

ಕೂಡಲೇ ಫಕ್ರುದ್ದೀನ್ ನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಆತ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಮೃತಪಟ್ಟಿದ್ದಾನೆ. ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಂತೋಪ್ ಹುಲಗಪ್ಪ ವಡ್ಡರಗೆಯನ್ನು ನವಲಗುಂದ ಪೊಲೀಸರು ಮೊದಲೇ ವಶಕ್ಕೆ ಪಡೆದಿದ್ದರು.
ಸದ್ಯ ಸಂತೋಷ್ ಮೇಲೆ ಕೊಲೆ ಪ್ರಕರಣ ದಾಖಲಾದರೆ, ಇತ್ತ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿ ಫಕ್ರುದ್ದೀನ್ ಕೊಲೆಯಾಗಿದ್ದಾನೆ.