– ಜೋಶಿ ವಿರುದ್ಧ ಕಣಕ್ಕಿಳಿಯೋ ಕಾಂಗ್ರೆಸ್ ಅಭ್ಯರ್ಥಿ ಯಾರು?
– ಕಾಂಗ್ರೆಸ್‌ನಿಂದ ಲಿಂಗಾಯತ ಟ್ರಂಪ್ ಕಾರ್ಡ್ ಬಳಕೆ?
ಧಾರವಾಡ: ರಾಜ್ಯ ಬಿಜೆಪಿ (BJP) ಪಾಲಿನ ಮತ್ತೊಂದು ಭದ್ರಕೋಟೆಯೆಂದರೆ ಅದು ಹುಬ್ಬಳ್ಳಿ-ಧಾರವಾಡ (Hubballi-Dharwad). 28 ವರ್ಷಗಳ ಬಳಿಕ ಈ ಲೋಕಸಭಾ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಪಣ ತೊಟ್ಟಂತೆ ಕಾಣುತ್ತಿದೆ. ಧಾರವಾಡದಲ್ಲಿ ಮತ್ತೊಂದು ವಿಜಯಪತಾಕೆ ಹಾರಿಸಲು ತಂತ್ರ ರೂಪಿಸಿದೆ. ಸ್ವಾತಂತ್ರ್ಯ ನಂತರ ಧಾರವಾಡ ಉತ್ತರ ಎಂಬ ಹೆಸರಿನಲ್ಲಿತ್ತು ಕ್ಷೇತ್ರ. 1952 ರಲ್ಲಿ ಮೊದಲ ಚುನಾವಣೆಗೆ ಸಾಕ್ಷಿಯಾದ ಈ ಕ್ಷೇತ್ರ 90 ರ ದಶಕದ ವರೆಗೂ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. 1996 ರಲ್ಲಿ ವಿಜಯ ಸಂಕೇಶ್ವರ ಅವರ ಚೊಚ್ಚಲ ಗೆಲುವಿನೊಂದಿಗೆ ಧಾರವಾಡದಲ್ಲಿ ಬಿಜೆಪಿ ಶಕೆ ಆರಂಭವಾಯಿತು. ಉದ್ಯಮಿ ವಿಜಯ ಸಂಕೇಶ್ವರ ಅವರ ಹ್ಯಾಟ್ರಿಕ್ ಗೆಲುವಿನ ಮೂಲಕ ಧಾರವಾಡದಲ್ಲಿ ಬಿಜೆಪಿ ಭದ್ರಬುನಾದಿ ಹಾಕಿತು. ಅಲ್ಲಿಂದ ಇಲ್ಲಿಯವರೆಗೂ ಬಿಜೆಪಿ ತನ್ನ ವಿಜಯಯಾತ್ರೆ ಮುಂದುವರಿಸಿದೆ.
Advertisement
ಕ್ಷೇತ್ರ ಪುನರ್ ವಿಂಗಡಣೆಗೆ ಮೊದಲು 2004 ರಲ್ಲಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದರು. ಅಲ್ಲಿಂದ ಸತತ ನಾಲ್ಕು ಚುನಾವಣೆಗಳಲ್ಲಿ ಜೋಶಿ ಜಯಭೇರಿ (2004, 2009, 2014, 2019) ಬಾರಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಚಿವ ಸಂಪುಟದಲ್ಲಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ 5 ವರ್ಷ ಪೂರ್ಣಾವಧಿ ವರೆಗೆ ಕಾರ್ಯನಿರ್ವಹಿಸಿದ್ದಾರೆ. ಈಗ ಮತ್ತೆ 2024 ರ ಲೋಕಸಭಾ ಚುನಾವಣೆಗೆ ಪಕ್ಷದಿಂದ ಟಿಕೆಟ್ ಗಿಟ್ಟಿಸಿದ್ದಾರೆ. ಇದನ್ನೂ ಓದಿ: Davanagere Lok Sabha 2024: ಬೆಣ್ಣೆ ನಗರಿನ ಕುಟುಂಬದ ಭದ್ರಕೋಟೆ ಮಾಡ್ತಾರಾ ಇಲ್ಲ ‘ಕೈ’ ಹಿಡೀತಾರಾ ಜನ?
Advertisement
Advertisement
ಕ್ಷೇತ್ರ ಪರಿಚಯ
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿವೆ. ಅದರಲ್ಲಿ ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಧಾರವಾಡ ಪೂರ್ವ, ಹುಬ್ಬಳ್ಳಿ ಧಾರವಾಡ ಪಶ್ಚಿಮ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ನವಲಗುಂದ, ಕಲಘಟಗಿ, ಕುಂದಗೋಳ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರ ಒಳಪಟ್ಟಿದೆ.
Advertisement
ಧಾರವಾಡ ಜಿಲ್ಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಕಡೆ ಕಾಂಗ್ರೆಸ್ ಗೆದ್ದಿದ್ದರೆ, ಇನ್ನು ನಾಲ್ಕು ಕಡೆ ಬಿಜೆಪಿ (BJP) ಅಭ್ಯರ್ಥಿಗಳು ಗೆದ್ದಿದ್ದಾರೆ. ಸದ್ಯ ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದು, ಕಾಂಗ್ರೆಸ್ ಪಕ್ಷದಿಂದ ಯಾರು ಅಭ್ಯರ್ಥಿ ಎಂದು ಲೆಕ್ಕಾಚಾರ ನಡೆದಿವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸದ್ಯ ಸಂಸದರಾಗಿದ್ದು, ಅವರನ್ನ ಮಣಿಸಲು ಕಾಂಗ್ರೆಸ್ ಮತ್ತೊಮ್ಮೆ ಲಿಂಗಾಯತ ಟ್ರಂಪ್ ಕಾರ್ಡ್ ಬಳಸಬಹುದು ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಶಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ ಸೋಲನುಭವಿಸಿದ್ದರು. ಜೋಶಿ ಒಟ್ಟು 6,84,837 ಹಾಗೂ ಕುಲಕರ್ಣಿ 4,79,765 ಮತಗಳನ್ನು ಪಡೆದಿದ್ದರು. 2,05,072 ಮತಗಳ ಅಂತರದಿಂದ ಜೋಶಿ ಜಯ ಸಾಧಿಸಿದ್ದರು.
ಮತದಾರರ ವಿವರ
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,82,368 ಮತದಾರರಿದ್ದಾರೆ. ಅವರ ಪೈಕಿ ಪುರುಷರು 8,95,562 ಹಾಗೂ ಮಹಿಳಾ ಮತದಾರರು 8,86,716 ಮಂದಿ ಇದ್ದಾರೆ. ಇದನ್ನೂ ಓದಿ: Chikkodi Lok Sabha 2024: ‘ಕೈ’ ತಪ್ಪಿ ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯುತ್ತಾ? – ಮತ್ತೊಂದು ಗೆಲುವಿಗೆ ಬಿಜೆಪಿ ತಂತ್ರವೇನು?
5ನೇ ಬಾರಿ ಜೋಶಿ ಕಣಕ್ಕೆ
ಈ ಕ್ಷೇತ್ರದಲ್ಲಿ ಆರ್‌ಎಸ್‌ಎಸ್ ಹಿಡಿತ ಚೆನ್ನಾಗಿದೆ. ಹೀಗಾಗಿ ಡಿ.ಕೆ.ನಾಯ್ಕರ್ ಅವರ ನಂತರ ಸತತವಾಗಿ ಬಿಜೆಪಿ ಗೆಲ್ಲುತ್ತ ಬಂದಿದೆ. ತಳಮಟ್ಟದಲ್ಲಿ ಆರ್‌ಎಸ್‌ಎಸ್ ಕೆಲಸ ಮಾಡುತ್ತಲೇ ಇರುತ್ತೆ. ಸದ್ಯ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ಶಾಸಕರಲ್ಲಿ ಬಿಜೆಪಿಯ 4 ಶಾಸಕರೂ ಲಿಂಗಾಯತರೇ. ಹೀಗಾಗಿ ಇದು ಕೂಡಾ ಬಿಜೆಪಿಗೆ ಲಿಂಗಾಯತ ಮತ ಬರಲು ಸಹಾಯವಾಗಲಿದೆ. ಸದ್ಯ ಪ್ರಹ್ಲಾದ ಜೋಶಿ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ವಿಧಾನಸಭೆಯಲ್ಲಿ ಟಿಕೆಟ್ ನೀಡದಿದ್ದಕ್ಕೆ ಬಂಡಾಯವೆದ್ದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೇಂದ್ರ ನಾಯಕರ ಮನವೊಲಿಕೆ ಪ್ರಯತ್ನದಿಂದ ಪಕ್ಷಕ್ಕೆ ವಾಪಸ್ ಆಗಿದ್ದಾರೆ. ಅವರು ಧಾರವಾಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಜೋಶಿ ಅವರಿಗೆ ಪಕ್ಷ ಮಣೆ ಹಾಕಿದೆ. ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ಕೊಡಬಹುದು ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್‌ನಿಂದ ಲಿಂಗಾಯತ ಟ್ರಂಪ್ ಕಾರ್ಡ್ ಬಳಕೆ?
ಮತ್ತೊಂದು ಕಡೆ ಕಾಂಗ್ರೆಸ್ (Congress) ಕೂಡಾ ಲಿಂಗಾಯತ ಟ್ರಂಪ್ ಕಾರ್ಡ್ ಬಳಸಲು ಮುಂದಾಗಿದೆ. ಈ ಬಾರಿ ಧಾರವಾಡ ಲೋಕಸಭಾ ಟಿಕೆಟ್‌ಗಾಗಿ ಆಗಲೇ ಕಾಂಗ್ರೆಸ್‌ಗೆ 17 ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಆದರೆ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಚ್ಛಿಸಿದ್ದಾರೆ ಎನ್ನಲಾಗಿದೆ. ವಿನಯ್ ಕುಲಕರ್ಣಿಗೆ ಜಿಲ್ಲೆಗೆ ಬರಲು ಅವಕಾಶ ಇಲ್ಲ. ಆದರೆ ಹೊರಗಿದ್ದೆ ಅವರು ಪತ್ನಿಯ ಸಹಾಯದಿಂದ ಚುನಾವಣೆ ಗೆದ್ದವರು. ಅದೇ ತಂತ್ರಗಾರಿಕೆ ಬಳಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಶಿವಲೀಲಾ ಕುಲಕರ್ಣಿಗೆ ಟಿಕೆಟ್ ಕೊಟ್ಟಿದ್ದೇ ಆದರೆ ವಿನಯ್ ಕುಲಕರ್ಣಿ ಶಿಗ್ಗಾಂವಿಯಲ್ಲಿ ಠಿಕಾಣಿ ಹೂಡಲಿದ್ದಾರೆ. ಅಲ್ಲದೇ ಕಿತ್ತೂರ ಭಾಗದಲ್ಲಿ ಕುಳಿತು ಪತ್ನಿ ಪರ ಚುನಾವಣೆ ಪ್ರಚಾರ ಮಾಡಲಿದ್ದಾರೆ. ಇನ್ನುಳಿದಂತೆ ಕಾಂಗ್ರೆಸ್ ನಾಲ್ಕು ಶಾಸಕರು ಇದಕ್ಕೆ ಕೈ ಜೋಡಿಸಲಿದ್ದಾರೆ ಎಂಬ ಪ್ಲಾನ್ ಇದೆ. ಸದ್ಯ ಕಾಂಗ್ರೆಸ್ ಇಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿ ತನ್ನ ಗ್ಯಾರಂಟಿ ಯೋಜನೆ ಲಾಭ ಮಾಡಿಕೊಳ್ಳಲು ನೋಡುತ್ತಿದೆ. ಇನ್ನು ಶಿವಲೀಲಾ ಹೊರತುಪಡಿಸಿ ಮೋಹನ ಲಿಂಬಿಕಾಯಿ, ರಜತ್ ಉಳ್ಳಾಗಡ್ಡಿಮಠ, ವಿನೋದ ಅಸೂಟಿ, ಲೋಹಿತ್ ನಾಯ್ಕರ್ ಕೂಡಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಜೋಶಿ ವಿರುದ್ಧ ಗೆಲ್ಲಬೇಕಾದರೆ ಒಳ್ಳೆ ಅಭ್ಯರ್ಥಿ ಬೇಕು. ಹೀಗಾಗಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಸಚಿವ ಸಂತೋಷ ಲಾಡ್ ಅವರನ್ನೂ ಕಣಕ್ಕೆ ಇಳಿಸಬಹುದು ಎಂಬ ಮಾತು ಕೂಡ ಇದೆ. ಲಾಡ್ ಮರಾಠಾ ಆಗಿದ್ದರೂ ಮುಸ್ಲಿಂ ಹಾಗೂ ಉಳಿದ ಮತ ಪಡೆಯುವಲ್ಲಿ ಸಫಲರಾಗಬಹುದು ಎಂಬ ಲೆಕ್ಕಾಚಾರ ಇವೆ. ಕೊನೆಯ ಕ್ಷಣದಲ್ಲಿ ಟಿಕೆಟ್ ಯಾರ ಕೈಸೇರಲಿದೆಯೋ ಎಂಬುದು ಪ್ರಶ್ನೆಯಾಗಿದೆ. ಇದನ್ನೂ ಓದಿ: Lok Sabha 2024: ಕೋಟೆ ನಾಡಿಗೆ ಯಾರಾಗ್ತಾರೆ ಒಡೆಯಾ?
ಹಿಂದಿನ ಲೆಕ್ಕಾಚಾರ ನೋಡಿದರೆ 16 ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಹೆಚ್ಚು ಗೆದ್ದವರು ಬ್ರಾಹ್ಮಣ ಅಭ್ಯರ್ಥಿಯೇ. ಸರೋಜಿನಿ ಮಹಿಷಿ ಕೂಡಾ ಬ್ರಾಹ್ಮಣ ಸಮಾಜಕ್ಕೆ ಸೇರಿದವರು. ಅವರು 5 ಬಾರಿ ಇಲ್ಲಿ ಗೆದ್ದಿದ್ದಾರೆ. ಮತ್ತೊಂದು ಕಡೆ ಸದ್ಯದ ಕೇಂದ್ರ ಸಚಿವ ಜೋಶಿ ಅವರು ನಾಲ್ಕು ಬಾರಿ ಗೆದ್ದವರು. ಹೀಗಾಗಿ ಲಿಂಗಾಯತ ಮತಗಳು ಹೆಚ್ಚಿರುವ ಈ ಕ್ಷೇತ್ರದಲ್ಲಿ ಬ್ರಾಹ್ಮಣ ಅಭ್ಯರ್ಥಿ ಗೆದ್ದಿದ್ದಾರೆ. ಮೂರು ಬಾರಿ ಲಿಂಗಾಯತ ಅಭ್ಯರ್ಥಿ, ನಾಲ್ಕು ಬಾರಿ ಕುರುಬ ಅಭ್ಯರ್ಥಿ ಇಲ್ಲಿ ಗೆದ್ದಿದ್ದಾರೆ.
ಜಾತಿವಾರು ಲೆಕ್ಕಾಚಾರ
ಲಿಂಗಾಯತ – 5,90,000
ಎಸ್ಸಿ ಮತ್ತು ಎಸ್ಟಿ – 2,60,000
ಮುಸ್ಲಿಂ – 3,90,000
ಕುರುಬ – 1,30,000
ಬ್ರಾಹ್ಮಣ – 85,000
ಮರಾಠಾ – 1,50,000
ಇತರೆ – 1,77,368
(ರೆಡ್ಡಿ, ಎಸ್.ಎಸ್.ಕೆ., ಜೈನ್, ಕ್ರಿಶ್ಚಿಯನ್ ಸೇರಿದಂತೆ)