– 10 ರಿಂದ 6 ಗಂಟೆವರೆಗೆ ಅವಶ್ಯಕ ಅಂಗಡಿಗಳು ಮಾತ್ರ ಓಪನ್
ಧಾರವಾಡ: ಧಾರವಾಡ ಜಿಲ್ಲೆ ಆರೇಂಜ್ ಜೋನ್‍ನಲ್ಲಿ ಇರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರಕ್ಕೆ ಸದ್ಯ ಯಾವುದೇ ಸಡಿಲಿಕೆಯನ್ನು ನೀಡಲಾಗಿಲ್ಲ. ಧಾರವಾಡಕ್ಕೆ ಷರತ್ತು ಬದ್ಧ ಸಡಿಲಿಕೆ ನೀಡಲಾಗಿದೆ. ಗ್ರಾಮೀಣ ಭಾಗಕ್ಕೆ ಕೂಡಾ ಸಡಿಲಿಕೆ ನೀಡಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಧಾರವಾಡದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಅಗತ್ಯ ಸರಕು ಸಾಗಣೆ, ಉತ್ಪಾದನೆ ಅವಕಾಶ ಕೊಡಲಾಗಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಕಂಟೋನ್ಮೆಂಟ್ ವ್ಯಾಪ್ತಿ ಹೊರಗಿನ ಕೈಗಾರಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಮುಗ್ಗಟ್ಟು ಕಾಯ್ದೆ ಅಡಿ ನೋಂದಾಯಿತ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಧಾರವಾಡ ಗ್ರಾಮೀಣ, ನವಲಗುಂದ, ಅಣ್ಣಿಗೇರಿ, ಅಳ್ನಾವರ, ಕಲಘಟಗಿ ಹಾಗೂ ಕುಂದಗೋಳ ಪಟ್ಟಣಗಳ ಅಂಗಡಿಗಳಿಗೂ ತೆರೆಯಲು ಅವಕಾಶ ನೀಡಲಾಗಿದೆ ಎಂದರು.
Advertisement
Advertisement
ಹುಬ್ಬಳ್ಳಿಯಲ್ಲಿ ಕಂಟೋನ್ಮೆಂಟ್ ಜೋನ್ ಇದೆ. ಹೀಗಾಗಿ ಹುಬ್ಬಳ್ಳಿ ನಗರದಲ್ಲಿ ಯಾವುದೇ ಅಂಗಡಿ ತೆರೆಯಲು ಅವಕಾಶ ಇಲ್ಲ. ಧಾರವಾಡ ನಗರದಲ್ಲಿ ವಾರದಲ್ಲಿ ನಾಲ್ಕು ದಿನಗಳಾದ ಸೋಮವಾರದಿಂದ ಗುರುವಾರವರೆಗೆ ಅಂಗಡಿ ತೆರೆಯಲು ಅವಕಾಶ ಇದೆ. ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಮಾತ್ರ ಅಂಗಡಿಗಳನ್ನು ತೆರೆಯಬಹುದು. ಯಾವ ಅಂಗಡಿ ತೆರೆಯಬೇಕು ಎಂದು ಡಿಸಿ ಲಿಖಿತ ಆದೇಶ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.
Advertisement
Advertisement
ಕೈಗಾರಿಕೋದ್ಯಮಿಗಳು ಕಾರ್ಮಿಕರ ಸುರಕ್ಷತೆಗೆ ಒತ್ತು ಕೊಡಬೇಕು. ಶೇಕಡಾ 50ರಷ್ಟು ಕಾರ್ಮಿಕರ ನಿರ್ವಹಣೆ ಮಾಡಬೇಕು. ಜನ ಸಹಕಾರ ಕೊಟ್ಟರೆ ಜಿಲ್ಲೆ ಹಸಿರು ಝೋನ್ ಆಗಲಿದೆ ಎಂದರು. ಈ ಮಧ್ಯೆ ಮದ್ಯ ಮಾರಾಟ ನಿಷೇಧ ಭಗವಂತನ ದಯೆಯಿಂದ ಹಾಗೇ ಮುಂದುವರಿಯಲಿ ಎಂದು ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮಾತು ಹೇಳಿದ್ದಕ್ಕೆ, ನಗುತ್ತಲೇ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಹಾಗೇ ಮಾಡಿದರೆ ಸರ್ಕಾರಕ್ಕೆ 20 ಸಾವಿರ ಕೋಟಿ ನಷ್ಟ ಆಗುತ್ತದೆ ಎಂದರು.
ಇದೇ ವೇಳೆ ಬೆಳಗಾವಿಯಲ್ಲಿ ಪೊಲೀಸರ ಹಾಗೂ ಸೈನಿಕನ ನಡುವೆ ನಡೆದ ಗಲಾಟೆಯ ಬಗ್ಗೆ ತನಿಖೆ ನಡೆದಿದ್ದು, ನಾವು ಎರಡು ಕಡೆಯ ಮುಖ ನೋಡಬೇಕಾಗಿದೆ ಎಂದರು. ಮಂಡ್ಯದಲ್ಲಿ ವಿಧಾನ ಪರಿಷತ್ ಸದಸ್ಯನ ಪ್ರಕರಣ ಹಾಗೂ ಬೆಳಗಾವಿ ಪ್ರಕರಣ ಎರಡು ಬೇರೆಯಾಗಿದ್ದು, ಎರಡನ್ನು ಒಂದೇ ರೀತಿ ನೋಡಬಾರದು ಎಂದು ಶೆಟ್ಟರ್ ತಿಳಿಸಿದರು.