ಧಾರವಾಡ: ಕಳ್ಳರ ಗುಂಪೊಂದು ಮನೆಗೆ ನುಗಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆಗೈದು 150 ಗ್ರಾಂ ಚಿನ್ನ, 40 ಸಾವಿರ ರೂ. ನಗದು ದೋಚಿದ ಘಟನೆ ನಗರದಲ್ಲಿ ನಡೆದಿದೆ.
ತೇಜಸ್ವಿನಗರದ 5 ಕ್ರಾಸ್‍ನಲ್ಲಿರುವ ಅನಿಲ್ ಕುಸುಗಲ್ ಎಂಬವರ ಮನೆಗೆ ನುಗ್ಗಿದ 4 ಜನರ ಕಳ್ಳರ ಗುಂಪು ಕೃತ್ಯ ಎಸಗಿ ಪರಾರಿಯಾಗಿದೆ. ಕಳ್ಳರಿಂದ ಹಲ್ಲೆಗೆ ಒಳಗಾದ ಅನಿಲ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆರೋಪಿಗಳು ಮುಂಜಾನೆ 2 ಗಂಟೆಗೆ ಅನಿಲ್ ಅವರ ಮನೆ ಬಾಗಿಲು ಮುರಿದು ಒಳಗೆ ನುಗ್ಗಿದ್ದಾರೆ. ಬಳಿಕ ಕುಟುಂಬಸ್ಥರ ಮೈಮೇಲಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ ಅಲ್ಮೇರಾದಲ್ಲಿದ್ದ 40 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಆರೋಪಿಗಳು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಅನಿಲ್ ಕುಸುಗಲ್ ಹೇಳಿದ್ದಾರೆ.
ಕಳ್ಳರು ರಾಡ್‍ನಿಂದ ತಲೆಗೆ ಹೊಡೆದ ಪರಿಣಾಮ ಅನಿಲ್ ಕುಮಾರ್ ಅವರ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಬಂಧ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.