ಧಾರವಾಡ: ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಿಎಂ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ, ನಮ್ಮ ಪಕ್ಷದಿಂದ ಇಬ್ಬರು ಮಂತ್ರಿಗಳನ್ನು ಆಯ್ಕೆ ಮಾಡುವ ಅವಕಾಶವಿದ್ದರೂ ಮಾಡುತ್ತಿಲ್ಲ. ಈ ಕುರಿತು ಸಿಎಂ ಕುಮಾರಸ್ವಾಮಿ ಅವರನ್ನೇ ನೀವು ಕೇಳಿ ಎಂದು ಗರಂ ಆದರು. ಬಳಿಕ ಮಾತನಾಡಿ, ಲೋಕಸಭಾ ಚುನಾವಣಾ ಕಣಕ್ಕೆ ಇಳಿಯುವ ವಿಚಾರವಿದ್ದರೆ ಈ ಹಿಂದೆಯೇ ಸ್ಪರ್ಧಿಸುತ್ತಿದ್ದೆ. ಹೀಗಾಗಿ ನಾನು ಲೋಕಸಭಾ ಚುನಾವಣೆಯ ಧಾರವಾಡ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: ಹೆಬ್ಬೆಟ್ಟು ಸಿಎಂ ಕುಮಾರಸ್ವಾಮಿ – ಬಸವರಾಜ್ ಹೊರಟ್ಟಿ ಕಿಡಿ
ಸಿಎಂ ಪರ ಬ್ಯಾಟಿಂಗ್:
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಗನ ಸಿನಿಮಾ ನೋಡುವುದಕ್ಕೆ ಹೋಗಿದ್ದರಲ್ಲಿ ತಪ್ಪೇನಿದೆ? ಬಿಜೆಪಿಯವರೇನು ತಮ್ಮ ಮಕ್ಕಳನ್ನು ಬಿಟ್ಟು ಬಿಟ್ಟಿದಾರೆಯೇ? 24 ಗಂಟೆ ರಾಜಕೀಯವನ್ನು ಮಾಡುವುದು ಕಷ್ಟ. ಆದರೆ ಇಬ್ಬರು 24 ಗಂಟೆ ರಾಜಕೀಯವನ್ನೇ ಮಾಡುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು. ಇದನ್ನು ಓದಿ: ಸಚಿವ ಸ್ಥಾನ ಕೊಟ್ರೆ ಪ್ರಮಾಣವಚನ, ಇಲ್ಲಂದ್ರೆ ಹುಬ್ಳಿ ದಾರಿ : ಬಸವರಾಜ್ ಹೊರಟ್ಟಿ
ಆಪರೇಷನ್ ಕಮಲ ಯಾಕೆ ಮಾಡುತ್ತಿದ್ದಾರೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕು, ಅದನ್ನು ಬಿಟ್ಟು ಈ ರೀತಿ ಮಾಡುವುದು ಸರಿಯಲ್ಲ. ಬಿಜೆಪಿಯವರ ವರ್ತನೆಯಿಂದ ರಾಜ್ಯದ ಆಡಳಿತ ಹದಗೆಟ್ಟು ಹೋಗಿದೆ. ಇದು ಪ್ರಜಾಪ್ರಭುತ್ವ ಒಳ್ಳೆಯ ನಡತೆಯಲ್ಲ. ಈ ನಡವಳಿಕೆ ನನಗೆ ಹೇಸಿಗೆ ಅನಿಸುತ್ತಿದೆ. ಸರ್ಕಾರ ಬೀಳಿಸುವುದಾದರೆ ಬೀಳಿಸಿ ಬಿಡಲಿ, ಇಲ್ಲವೇ ಸರ್ಕಾರ ನಡೆಸಲು ಬಿಡಲಿ ಎಂದು ಕಿಡಿಕಾರಿದರು.
ಆಪರೇಷನ್ ಕಮಲ ಒಂದು ರೀತಿ ತೋಳ ಬಂತು ತೋಳ ಎನ್ನುವಂತಾಗಿದೆ. ಪ್ರತಿದಿನ ಕಾಲು ಜಗ್ಗಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಬರ ಅಧ್ಯಯನ ವಿಷಯದಲ್ಲಿ ಎಲ್ಲರೂ ಹೈಡ್ರಾಮಾ ನಡೆಸಿದ್ದಾರೆ. ಸರ್ಕಾರದ ತಂಡಗಳು ಹೋಗಿ ಅಧ್ಯಯನ ಮಾಡಿವೆ. ವಿರೋಧ ಪಕ್ಷವಾಗಿ ಬಿಜೆಪಿ ತನ್ನ ಕಾರ್ಯವನ್ನು ಮಾಡಬೇಕು. ರಾಜ್ಯದ ಅಭಿವೃದ್ಧಿಗಾಗಿ ಸಹಕರಿಸುವುದು ವಿರೋಧ ಪಕ್ಷದ ಧರ್ಮ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv