ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳ ಹೂತಿಟ್ಟಿದ್ದೆ ಎಂದು ಅನಾಮಿಕ ವ್ಯಕ್ತಿ ದೂರು ನೀಡಿದಂತೆ, ಭೂಮಿಯನ್ನ ಅಗೆದರೂ ಸಮಾಧಿಯೊಳಗಿನ ಸತ್ಯ ನಿಗೂಢವಾಗಿಯೇ ಉಳಿದಿದೆ. ಅನಾಮಿಕ ವ್ಯಕ್ತಿ ತೋರಿಸಿದ 13 ಜಾಗಗಳ ಪೈಕಿ ಮೊದಲ ಜಾಗದಲ್ಲಿ 15 ಬೈ 8 ಅಡಿ ಅಗೆದ್ರೂ ಏನೂ ಸಿಗದೆ ಎಸ್ಐಟಿ ಸುಸ್ತಾಗಿದೆ.
ಆದರೂ ಆತ ಗುರುತಿಸಿರೋ ಎಲ್ಲಾ 13 ಜಾಗಗಳನ್ನ ಅಗೆಯಲು ಎಸ್ಐಟಿ ನಿರ್ಧರಿಸಿದ್ದು, ಬುಧವಾರ ಆ ಕೆಲಸ ಮುಂದುವರಿಯಲಿದೆ. ಈ ನಡುವೆ ಅನಾಮಿಕ ವ್ಯಕ್ತಿಯ ನಡೆ ಅನುಮಾನ ಹುಟ್ಟಿಸಿದ್ದು, ಎಸ್ಐಟಿ ಅಧಿಕಾರಿಗಳೂ ಗೊಂದಲದಲ್ಲಿದ್ದಾರೆ.
ನೂರಾರು ಶವಗಳನ್ನು ಹೂತಿಟ್ಟಿದ್ದೆ ಎಂದಿದ್ದ ಅನಾಮಿಕ ವ್ಯಕ್ತಿ ದೂರು ನೀಡಿದ್ದ. ಬಳಿಕ ಆತನೇ ಬಂದು ನೇತ್ರಾವತಿ ಸ್ನಾನಘಟ್ಟದ ಪರಿಸರದಲ್ಲಿ ಒಟ್ಟು 13 ಜಾಗಗಳನ್ನ ಗುರುತಿಸಿ ಎಲ್ಲಾ ಕಡೆ ಶವಗಳನ್ನು ಹೂತಾಕಿದ್ದೇನೆ ಎಂದು ಅಧಿಕಾರಿಗಳ ಜೊತೆ ಜಾಗ ಗುರುತು ಮಾಡಿದ್ದಾನೆ. ಹೀಗಾಗಿ, ನಿನ್ನೆ ದಿನ ಪೂರ್ತಿ ಆತ ತೋರಿಸಿದ 13 ಜಾಗಗಳ ಪೈಕಿ ಮೊದಲ ಜಾಗದಲ್ಲಿ ಉತ್ಖನನ ಮಾಡೋ ಕಾರ್ಯ ನಡೆಸಲಾಗಿತ್ತು. ಬರೋಬ್ಬರಿ ಏಳು ಗಂಟೆಗಳ ಕಾಲ ನೇತ್ರಾವತಿ ಸ್ನಾನಘಟ್ಟದ ಬಳಿಯ ಜಾಗದಲ್ಲಿ 12 ಸಿಬ್ಬಂದಿ ನಾಲ್ಕೂವರೆ ಅಡಿ ಆಳ ಅಗೆದ್ರೂ ಏನು ಸಿಗಲಿಲ್ಲ. ಬಳಿಕ ಹಿಟಾಚಿ ಯಂತ್ರದ ಮೂಲಕ 15 ಅಡಿ ಅಗಲ ಹಾಗೂ 8 ಅಡಿ ಆಳಕ್ಕೆ ಅಗೆಯಲಾಗಿದೆ. ಸಂಜೆ 6 ಗಂಟೆಯವರೆಗೂ ಅಗೆದಾಗ ಏನೂ ಸಿಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಹೀಗಾಗಿ ಸಮಾಧಿಯೊಳಗಿನ ಸತ್ಯ ಮತ್ತೆ ನಿಗೂಢವಾಗಿಯೇ ಉಳಿಯಿತು.
ಅನಾಮಿಕ ವ್ಯಕ್ತಿ ತೋರಿಸಿದ 13 ಜಾಗಗಳ ಪೈಕಿ ಮೊದಲ ಜಾಗವನ್ನು ದಿನಪೂರ್ತಿ ಅಗೆದ್ರೂ ಏನೂ ಸಿಗದೇ ಇರುವುದರಿಂದ ಇನ್ನುಳಿದ ಜಾಗದ ಕಡೆ ಎಸ್ಐಟಿ ಗಮನ ಹರಿಸಿದೆ. ಇನ್ನುಳಿದ 12 ಜಾಗಗಳನ್ನೂ ಅಗೆಯಲು ಎಸ್ಐಟಿ ನಿರ್ಧರಿಸಿದೆ. ಮೊದಲ ಜಾಗದಲ್ಲಿ ಏನೂ ಸಿಗದಿದ್ರೂ ಮುಂದಿನ ಜಾಗದಲ್ಲಾದ್ರೂ ಆತ ಹೂತಿಟ್ಟಿದ್ದಾನೆ ಎನ್ನುವ ಯಾವುದಾದರು ಕುರುಹುಗಳು ಸಿಗಬಹುದು ಎಂದು ಎಸ್ಐಟಿ ಇಂದು ಮತ್ತೆ ಅಗೆಯುವ ಕೆಲಸಕ್ಕೆ ಮುಂದಾಗಿದೆ. ಮೊದಲ ಜಾಗವನ್ನು ಬಿಟ್ಟು ಇಂದು ಎರಡನೇ ಬಳಿಕ ಮೂರನೇ ಜಾಗವನ್ನು ಅಗೆಯಲು ತಯಾರಿ ನಡೆಸಿದೆ. ಇನ್ನುಳಿದ ಜಾಗಗಳು ದುರ್ಗಮ ಕಾಡಿನಲ್ಲಿ ಇರುವ ಕಾರಣ ಅಲ್ಲಿ ಕಾರ್ಮಿಕರೇ ಅಗೆಯುವ ಅನಿವಾರ್ಯ ಇದೆ. ಹಿಟಾಚಿಯಂತ ಯಂತ್ರೋಪಕರಣಗಳು ಅರಣ್ಯದೊಳಗೆ ಹೋಗಲು ಕಷ್ಟಕರವಾಗಿದ್ದು, ಅಗತ್ಯ ಬಿದ್ರೆ ಅದಕ್ಕೂ ಎಸ್ಐಟಿ ಪ್ಲಾನ್ ಮಾಡಿಕೊಂಡಿದೆ. ಮೊದಲ ಜಾಗದಲ್ಲಿ ಯಾವುದೇ ಕಳೇಬರ ಸಿಗದೇ ಇರುವುದರಿಂದ ಕುತೂಹಲದಿಂದ ಇದ್ದ ಎಲ್ಲರಿಗೂ ಅನಾಮಿಕ ವ್ಯಕ್ತಿಯ ಮೇಲೆಯೇ ಇದೀಗ ಅನುಮಾನ ಹುಟ್ಟಿದೆ. ಈತ ಯಾವ ಉದ್ದೇಶ, ಕಾರಣ ಇಟ್ಟುಕೊಂಡು ಈ ರೀತಿ ಮಾಡಿದ್ದಾನೆ ಎನ್ನುವ ಮಾತುಗಳು ಹರಿದಾಡ್ತಿದೆ.