ಬಳ್ಳಾರಿ: ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ (Sasikanth Senthil) ಪ್ರಾಮಾಣಿಕರಾಗಿದ್ದರೆ ಧರ್ಮಸ್ಥಳ ಬುರುಡೆ ಪ್ರಕರಣವನ್ನು (Dharmasthala Case) ಸಿಎಂ ಸಿದ್ದರಾಮಯ್ಯನವರ ಬಳಿ ಮಾತನಾಡಿ ಸಿಬಿಐ, ಎನ್ಐಎಗೆ ಕೊಡಲು ತಿಳಿಸಲಿ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ಸವಾಲು ಎಸೆದಿದ್ದಾರೆ.
ತನ್ನ ವಿರುದ್ಧ ಸೆಂಥಿಲ್ ಮಾನನಷ್ಟ ಪ್ರಕರಣ ಹೂಡಿದ ಬಗ್ಗೆ ಬಳ್ಳಾರಿಯ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇಡೀ ವಿಶ್ವಕ್ಕೆ ಹಿಂದೂ (Hindu) ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಎಡಪಂಥೀಯ ಮನಸ್ಥಿತಿ, ನಗರ ನಕ್ಸಲರು ಭಾಗಿಯಾಗಿ ಷಡ್ಯಂತ್ರ ರೂಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೆಲವರು ಧರ್ಮಸ್ಥಳದ ಬಗ್ಗೆ ಭಯದ ವಾತಾವರಣ ಸೃಷ್ಟಿಸಿ ಅಪಪ್ರಚಾರ ಮಾಡಿದರು. ಚಿನ್ನಯ್ಯ, ಸುಜಾತಾ ಭಟ್ ಅವರನ್ನು ಕರೆದುಕೊಂಡು ಬಂದು ಅಪಪ್ರಚಾರ ಮಾಡಲು ಹೊರಟಿದ್ದರು. ಮಾಧ್ಯಮ ಹಾಗೂ ಎಸ್ಐಟಿಯಿಂದ ಈ ವಿಚಾರ ಹೊರಗಡೆ ಹೊರಗಡೆ ಬಂದಿದೆ ಎಂದರು. ಇದನ್ನೂ ಓದಿ: ಬುರುಡೆ ಕೇಸಲ್ಲಿ ಸೆಂಥಿಲ್ ಹೆಸರು – ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು
ಈ ಷಡ್ಯಂತ್ರದ ಹಿಂದೆ ಕರ್ನಾಟಕದಲ್ಲಿ ಐಎಎಸ್ ಅಧಿಕಾರಿ ಆಗಿ ಕೆಲಸ ಮಾಡಿದ್ದ ಸಸಿಕಾಂತ್ ಸೆಂಥಿಲ್ ಕೈವಾಡ ಇದೆ ಎನ್ನುವುದನ್ನು ಹೇಳಿದ್ದು ನಾನು. ಮುಸುಕುಧಾರಿ ಮೂಲವನ್ನು ಹೇಳಿದ್ದು ನಾನು. ಎಡಪಂಥೀಯ ವಿಚಾರಾಧಾರೆಗಳನ್ನ ಇಟ್ಕೊಂಡು ಐಎಎಸ್ ಆಗಿ ಸೆಂಥಿಲ್ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಹಿಂದೂ ಧರ್ಮ, ಸಂಘಪರಿವಾರದ ಬಗ್ಗೆ ಮಾತಾಡುತ್ತಿದ್ದ ಅವರು ರಾಜೀನಾಮೆ ಕೊಟ್ಟು ಕಾಂಗ್ರೆಸ್ (Congress) ಸೇರಿದರು. ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಅದೇ ಸಸಿಕಾಂತ್ ಸೆಂಥಿಲ್ ಇಂದು ನನ್ನ ಮೇಲೆ ಮಾನನಷ್ಡ ಮೊಕದ್ದಮೆ ಹೂಡಿದ್ದಾರೆ ಎಂದರು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ – ʻಕೈʼ ಸಂಸದ ಸಸಿಕಾಂತ್ ಸೆಂಥಿಲ್ ಫಸ್ಟ್ ರಿಯಾಕ್ಷನ್
ಈಗಾಗಲೇ ಸಮೀರ್, ಜಯಂತ್, ಮಟ್ಟಣ್ಣನವರ್ ಎಲ್ಲರನ್ನೂ ಎಸ್ಐಟಿಯವರು ಕರೆಯುತ್ತಿದ್ದಾರೆ. ಸಸಿಕಾಂತ್ ಅವರ ಮನೆ ಮೆಟ್ಟಿಲು ಹತ್ತೋದು ಮಾತ್ರ ಬಾಕಿ ಇತ್ತು. ಸರ್ಕಾರವನ್ನು ಮೀರಿ ಅವರ ಮನೆ ಮೆಟ್ಟಿಲು ಹತ್ತೋದು ಅಷ್ಟು ಸುಲಭ ಅಲ್ಲ. ಇದರ ಹಿಂದೆ ಯಾವುದೋ ಒಂದು ವಿದೇಶಿ ಉಗ್ರವಾದ ಸಂಘಟನೆ ಇದೆ ಅನಿಸುತ್ತಿದೆ. ಅದಕ್ಕಾಗಿ ಇದನ್ನು ಎನ್ಐಎ ಹಾಗೂ ಸಿಬಿಐ ತನಿಖೆ ಆಗಬೇಕು ಎಂದು ನಾನು ಹೇಳಿದ್ದೆ ಎಂದು ಸಮರ್ಥಿಸಿದರು.
ಸಸಿಕಾಂತ್ ಸೆಂಥಿಲ್ ಹೂಡಿರುವ ಮಾನನಷ್ಡ ಮೊಕದ್ದಮೆ ಕೇಸ್ ಎದುರಿಸಿಲು ನಾನು ಸಿದ್ಧನಿದ್ದೇನೆ. ಅವರು ಕೋರ್ಟ್, ಲಾ ಬಗ್ಗೆ ಮಾತಾಡ್ತಿದ್ದಾರೆ. ಅವರು ಪಾರ್ಲಿಮೆಂಟ್ ಮೇಂಬರ್ ಇದ್ದಾರೆ. ಮಾನನಷ್ಟ ಮೊಕದ್ದಮೆ ಹಾಕಲಿ, ಅದರ ಜೊತೆಗೆ ಇದನ್ನ ಎನ್ಐಎಗೆ ಕೊಡಲು ಸಿಎಂ ಬಳಿ ಮನವಿ ಮಾಡಲಿ. ಇದರಲ್ಲಿ ನನ್ನ ಪಾತ್ರ ಇಲ್ಲ ಅನ್ನೋದನ್ನ ತೋರಿಸಲಿ. ನಾನು ಬಹಳ ಸ್ಪಷ್ಟವಾಗಿ ಸೆಂಥಿಲ್ ಹೆಸರು ತೆಗೆದುಕೊಂಡೇ ಹೇಳಿದ್ದೇನೆ. ನಾನು ಅದನ್ನ ಲೀಗಲ್ ಆಗಿ ಫೈಟ್ ಮಾಡುತ್ತೇನೆ ಎಂದರು.
ಸಿಬಿಐಗೆ ಜನಾರ್ದನರೆಡ್ಡಿ ವಿರುದ್ದ ನಾನು ದಾಖಲೆ ನೀಡಿದ್ದಕ್ಕೆ ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂಬ ಸೆಂಥಿಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜನಾರ್ದನರೆಡ್ಡಿ, ಸುಮ್ನೇ ಏನೋ ಮಾತನಾಡಬೇಕು ಅಂತಾ ಅವನು ಮಾತನಾಡುವುದು ಬೇಡ. ನಾನು ಅರೆಸ್ಟ್ ಆದ ಮಾರನೇ ದಿನ ಅವನು ಬಳ್ಳಾರಿಗೆ ಬಂದಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.