– ಬುರುಡೆ ಗ್ಯಾಂಗ್ ಷಡ್ಯಂತ್ರ ಎಸ್‌ಐಟಿ ತನಿಖೆಯಲ್ಲಿ ಸಾಬೀತು
– ತಿಮರೋಡಿ ಮನೆಯಲ್ಲಿ ಒಳಸಂಚು
ಬೆಂಗಳೂರು: ಬುರುಡೆಯನ್ನು ಹಿಡಿದುಕೊಂಡು ಧರ್ಮಸ್ಥಳಕ್ಕೆ(Dharmasthala Case) ಕಳಂಕ ಮೆತ್ತಲು ಬಂದವರು ಬೆತ್ತಲಾಗಿದ್ದಾರೆ. ಶೇಷ ತನಿಖಾ ತಂಡದ(SIT) ತನಿಖಾ ವರದಿಯಲ್ಲಿ ಪಿತೂರಿ ಸಾಧಕತನ ಬಟಾಬಯಲಗಿದ್ದು ಧರ್ಮ ಗೆದ್ದು ಅಧರ್ಮಕ್ಕೆ ಸೋಲಾಗಿದೆ. ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗ್ ನಡೆಸಿದ ಷಡ್ಯಂತ್ರ ಎಸ್‌ಐಟಿ ಸಲ್ಲಿಸಿದ ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ ನ.20 ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತನಿಖಾ ಪ್ರಾಥಮಿಕ ವರದಿ ಸಲ್ಲಿಸಿತ್ತು. ಈ ತನಿಖಾ ವರದಿಯಲ್ಲಿ 6 ಮಂದಿ ಯಾವ ರೀತಿ ನ್ಯಾಯಾಲಯದ (Court) ದಾರಿ ತಪ್ಪಿಸಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಉಲ್ಲೇಖಿಸಲಾಗಿದೆ.
ವರದಿಯಲ್ಲಿ ಏನಿದೆ?
ಚಿನ್ನಯ್ಯ(Chinnayya), ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ ಜಯಂತ್ ಹಾಗೂ ಸುಜಾತಾ ಭಟ್ ಅಪರಾಧ ಕೃತ್ಯದಲ್ಲಿ ಶಾಮೀಲಾಗಿದ್ದಾರೆ. ಪ್ರಕರಣದ ಮೊದಲ ಆರೋಪಿಯಾಗಿರುವ ದೂರುದಾರ ಚಿನ್ನಯ್ಯ ಆಮಿಷಕ್ಕೆ ಒಳಗಾಗಿ ಸುಳ್ಳು ಹೇಳಿದ್ದಾನೆ.
ಹಣವನ್ನು ಪಡೆದು ಚಿನ್ನಯ್ಯ ಬುರುಡೆ ಕಥೆ ಕಟ್ಟಿದ್ದ. ಅಪರಿಚಿತ ಶವ ಹೂತಿದ್ದೇನೆಂದು ಸುಳ್ಳು ಹೇಳಿಸಿ ಆರೋಪಿಗಳು ವಿಡಿಯೋ ರೆಕಾರ್ಡ್ ಮಾಡಿದ್ದರು. ವಿಠಲ ಗೌಡನಿಗೆ ಚಿನ್ನಯ್ಯ ಮೊದಲಿನಿಂದಲೂ ಪರಿಚಯ ಹೊಂದಿದ್ದ.
ಈ ಪರಿಚಯದ ಆಧಾರದ ಮೇಲೆ ಮಹೇಶ್ ತಿಮರೋಡಿ ಮನೆಗೆ ಚಿನ್ನಯ್ಯನನ್ನು ವಿಠ್ಠಲಗೌಡ ಕರೆದುಕೊಂಡು ಹೋಗಿ ಒಳಸಂಚು ನಡೆಸಲಾಗಿದೆ. ಈ ಸಂಚಿನ ಸಭೆಯಲ್ಲಿ ಗಿರೀಶ್ ಮಟ್ಟಣ್ಣನವರ್, ಜಯಂತ್, ವಿಠ್ಠಲಗೌಡ ಭಾಗಿಯಾಗಿ ಧರ್ಮಸ್ಥಳ ಮೇಲ್ವಿಚಾರಕರ ವಿರುದ್ಧ ಪಿತೂರಿಗೆ ಪ್ಲ್ಯಾನ್ ಮಾಡಲಾಯಿತು.
ಈ ಪ್ಲ್ಯಾನ್ ಪ್ರಕಾರ ನೂರಾರು ಶವ ಹೂತಿರುವುದಾಗಿ ಚಿನ್ನಯ್ಯನಿಂದ ಸುಳ್ಳು ಹೇಳಿಸಿ ವಿಡಿಯೋ ರೆಕಾರ್ಡ್ ಮಾಡಿಸಲಾಗಿತ್ತು. ತಲೆ ಬುರುಡೆಯೊಂದನ್ನು ಚಿನ್ನಯ್ಯನಿಗೆ ಕೊಟ್ಟು ಪೊಲೀಸರಿಗೆ ದೂರು ಕೊಡಿಸಿದ್ದರು. ನಂತರ ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹೇಳಿಕೆ ಕೊಡುವಂತೆ ಪ್ರೇರೇಪಿಸಿದ್ದರು.
ಧರ್ಮಸ್ಥಳದ ಮೇಲ್ವಿಚಾರಕರ ವಿರುದ್ಧ ಚಿನ್ನಯ್ಯ ಸುಳ್ಳು ಹೇಳಿದ್ದಾನೆ. ತಲೆ ಬುರುಡೆಯೊಂದನ್ನು ತಂದು ತಾನೇ ಹೂತಿದ್ದ ತಲೆ ಬುರುಡೆ ಎಂದು ಅಸತ್ಯ ನುಡಿದಿದ್ದಾನೆ. ಹಣದ ಆಮಿಷ ಹಾಗೂ ಬೆದರಿಕೆಗೆ ಒಳಪಟ್ಟು ಅಪರಿಚಿತ ಶವ ಅದರಲ್ಲೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯ ಶವಗಳನ್ನು ಹೂತಿರೋದಾಗಿ ಸುಳ್ಳು ಹೇಳಿದ್ದಾನೆ.
ಸುಳ್ಳು ದೂರು ನೀಡಿದ್ದು ಅಲ್ಲದೇ ನ್ಯಾಯಾಧೀಶರ ಮುಂದೆಯೂ ಕಥೆ ಕಟ್ಟಿದ್ದಾನೆ. ನ್ನಯ್ಯ ಮಾಡಿದ ಆರೋಪಗಳೆಲ್ಲವೂ ಸತ್ಯಕ್ಕೆ ದೂರ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಕಾರಣಕ್ಕೆ ಚಿನ್ನಯ್ಯನ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧನಕ್ಕೊಳಪಡಿಸಲಾಗಿದೆ.

