ಚಿತ್ರದುರ್ಗ: ಇಷ್ಟಾರ್ಥ ಸಿದ್ಧಿಯಾದ ಬಳಿಕ ದೇವರ ಮೇಲೆ ಹಣವನ್ನು ತೂರೋ ಸಂಪ್ರದಾಯ ಚಿತ್ರದುರ್ಗದ ದೊಡ್ಡವಜ್ರದ ಕಂಚಿವರದರಾಜಸ್ವಾಮಿ ದೇಗುಲದಲ್ಲಿ ನಡೆಯುತ್ತದೆ.
ಜಿಲ್ಲೆಯ ಹೊಸದುರ್ಗ ತಾಲೂಕಿನ ಗುಡ್ಡದನೇರಲಕೆರೆಯಲ್ಲಿರೋ ಈ ದೇಗುಲದ ದೊಡ್ಡವಜ್ರಕ್ಕೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸುತ್ತಾರೆ. ದೇವರಿಗೆ ಸ್ವಲ್ಪ ಹಣ ಕೊಟ್ಟರೆ, ಆ ಹಣಕ್ಕಿಂತ ಹೆಚ್ಚು ದುಡ್ಡನ್ನು ದೇವರು ಮತ್ತೆ ನೀಡುತ್ತಾನೆಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ವೆಂಕಟೇಶ್ವರನ ಭಕ್ತರು ದೇವರಿಗೆ ದುಡ್ಡಿನ ರೂಪದಲ್ಲಿ ವಿವಿಧ ಹರಕೆ ಸಲ್ಲಿಸುತ್ತಾರೆ.
ಹಣ ಅಂದ್ರೆ ಸತ್ತ ಹೆಣವು ಬಾಯಿ ಬಿಡುತ್ತೆ ಅನ್ನೋದು ಗಾದೆ ಮಾತು. ಆದರೆ ಬರದ ನಾಡಿನ ಭಕ್ತರು ಮಾತ್ರ ಹಣದ ಮೇಲಿನ ವ್ಯಾಮೋಹ ಮರೆತು ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೇಲೆ ತಮ್ಮಲ್ಲಿರೋ ದುಡ್ಡನ್ನು ತೂರುತ್ತಾರೆ. ಈ ದೇಗುಲದ ಬಳಿ ಒಂದೆಡೆ ಚೀಲಗಳಲ್ಲಿ ರಾಶಿ ರಾಶಿಯಾಗಿ ಚಿಲ್ಲರೆ ಕಂಡರೆ, ಮತ್ತೊಂದೆಡೆ ದುಡ್ಡನ್ನು ಕೈತುಂಬ ಹಿಡಿದುಕೊಂಡು ಭಕ್ತರು ಎಸೆಯುತ್ತಿರೋ ದೃಶ್ಯ ಕಾಣಸಿಗುತ್ತದೆ. ಕಂಚಿಪುರದ ಕಂಚಿವರದರಾಜಸ್ವಾಮಿ ದೇವರಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು, ತಮ್ಮ ಇಷ್ಟಾರ್ಥಗಳಾದ ಮದುವೆ, ಉದ್ಯೋಗ ಹಾಗು ಸಂತಾನ ಪ್ರಾಪ್ತಿ ಸೇರಿದಂತೆ ವಿವಿಧ ಬಯಕೆಗಳು ಈಡೇರಿದ ಬಳಿಕ ತಾವು ತಂದಿರೋ ದುಡ್ಡನ್ನು ದೇವರ ಮೇಲೆ ತೂರುವ ಮೂಲಕ ಅವರ ಹರಕೆ ತೀರಿಸುತ್ತಾರೆ.
ತಿರುಪತಿ ವೆಂಕಟೇಶ್ವರ ಸೇರಿದಂತೆ ಇತರೆ ದೇವರುಗಳಲ್ಲಿ ಹಣದ ವ್ಯಾಮೋಹ ಹೆಚ್ಚಿರುವುದು ಎಲ್ಲರಿಗೂ ತಿಳಿದ ಸಂಗತಿ. ಭಕ್ತರು ಸಹ ಹರಕೆ ರೂಪದಲ್ಲಿ ದೇವರಿಗೆ ಸ್ವಲ್ಪ ಹಣ ಕೊಟ್ಟರೆ, ಆ ಹಣಕ್ಕಿಂತ ಹೆಚ್ಚು ದುಡ್ಡನ್ನು ದೇವರು ಪುನಃ ನಮಗೆ ನೀಡುತ್ತಾನೆಂಬ ನಂಬಿಕೆಯಿದೆ. ಹೀಗಾಗಿ ವೆಂಕಟೇಶ್ವರನ ಭಕ್ತರು ದೇವರಿಗೆ ದುಡ್ಡಿನ ರೂಪದಲ್ಲಿ ವಿವಿಧ ಹರಕೆ ಸಲ್ಲಿಸುತ್ತಾರೆ. ಆದರೆ ಈ ದೊಡ್ಡವಜ್ರದಲ್ಲಿರೋ ಕಂಚಿವರದರಾಜಸ್ವಾಮಿ ಮಾತ್ರ ದುಡ್ಡಿನ ವ್ಯಾಮೋಹಿ ಅಲ್ಲವಂತೆ. ಹೀಗಾಗಿ ತನ್ನ ಭಕ್ತರು ಕೂಡ ದುಡ್ಡಿನ ಮೇಲಿನ ವ್ಯಾಮೋಹ ಕೈ ಬಿಟ್ಟು, ಅವರಲ್ಲಿರೋ ಹಣವನ್ನು ತಂದು ತನ್ನ ಮೇಲೆ ತೂರಿದಾಗ ಇತರರಿಗೆ ಸಹಕಾರಿಯಾಗಲೆಂಬ ಪರೋಪಕಾರಿ ಭಾವದಿಂದ ಈ ಸಂಪ್ರದಾಯ ರೂಢಿಯಲ್ಲಿದೆ. ಆದ್ದರಿಂದ ಪ್ರತಿವರ್ಷ ದೇಶದಲ್ಲೇ ಮೊದಲು ನಡೆಯುವ ಅಂಬಿನೋತ್ಸವ ಎಂಬ ಹೆಗ್ಗಳಿಕೆಗೆ ಶ್ರೀ ವರದರಾಜಸ್ವಾಮಿ ಅಂಬಿನೋತ್ಸವ ಪಾತ್ರವಾಗಿದೆ.
ಹಣಕ್ಕಾಗಿ ದೇವರ ಹೆಸರಲ್ಲಿ ಹಲವು ದಂಧೆಗಳು ಬಯಲಾಗುತ್ತಿರೋ ಈ ಕಾಲದಲ್ಲಿ, ಜನರಲ್ಲಿರುವ ಹಣದ ವ್ಯಾಮೋಹವನ್ನು ತೊಲಗಿಸೋ ದೇವರ ವಿಭಿನ್ನ ಸಂಪ್ರಧಾಯ ದೊಡ್ಡವಜ್ರದಲ್ಲಿ ಜೀವಂತವಾಗಿದೆ. ಹೀಗಾಗಿ ಇಂತಹ ಆಚರಣೆಗಳು ಹೆಚ್ಚಾದರೆ ಹಣದ ಮೇಲಿನ ಆಸೆಯಿಂದ ಸಮಾಜದಲ್ಲಿ ನಿತ್ಯ ನಡೆಯುವ ದುಷ್ಕ್ರತ್ಯಗಳಿಗೂ ಬ್ರೇಕ್ ಬೀಳಬಹುದೆಂಬುದು ಪ್ರಜ್ಞಾವಂತರ ಆಶಯವಾಗಿದೆ.