ರಾಯಚೂರು: ಹಿಂದಿನಿಂದ ಬಂದ ಬಹುತೇಕ ಸಂಪ್ರದಾಯ, ಆಚರಣೆಗಳು ಅವುಗಳದೇ ಆದ ಅರ್ಥಗಳನ್ನ ಹೊಂದಿರುತ್ತವೆ. ಸುಮಾರು 800 ವರ್ಷಗಳಿಂದ ರಾಯಚೂರಿನಲ್ಲೊಂದು ವಿಶಿಷ್ಟ ಜಾತ್ರೆ ನಡೆಯುತ್ತಿದೆ. ಸುಡು ಬಿಸಿಲಕಾಲದಲ್ಲಿ ಬರುವ ಈ ಜಾತ್ರೆ ಭಕ್ತರನ್ನ ತಂಪಾಗಿಸುತ್ತಿದೆ, ಭಕ್ತಿಯಲ್ಲಿ ಮಿಂದೇಳಿಸುತ್ತಿದೆ. ಇಲ್ಲಿಗೆ ಬರುವವರೆಲ್ಲಾ ಜೋರು ಮಳೆಯ ಅನುಭವ ಪಡೆಯುತ್ತಾರೆ.
ರಾಯಚೂರಿನ ದೇವದುರ್ಗದ ಜಾಲಹಳ್ಳಿ ಶ್ರೀಲಕ್ಷ್ಮೀರಂಗನಾಥ ಸ್ವಾಮಿಯ ಭಕ್ತರು ಒಬ್ಬರಿಗೊಬ್ಬರು ನೀರನ್ನ ಎರಚಿ ತಂಪಾಗೋ ಮೂಲಕ ಜಾತ್ರೆಯ ಸಂಭ್ರಮ ಸವಿಯುತ್ತಾರೆ. ಯುಗಾದಿ ಬಳಿಕ ಬರುವ ಈ ವಿಶಿಷ್ಟ ಜಾತ್ರೆಯಲ್ಲಿ ನೀರಿನಾಟವೇ ಪ್ರಮುಖ ಘಟ್ಟ. ಪ್ರತಿ ವರ್ಷ ಬಿರುಬಿಸಿಲಿನಲ್ಲೇ ಬರುವ ಈ ಜಾತ್ರೆ ಭಕ್ತರನ್ನೆಲ್ಲಾ ತಂಪಾಗಿಸುತ್ತದೆ.
Advertisement
Advertisement
ಸ್ವಾಮಿಯ ರಥೋತ್ಸವದ ಮುಂಚಿನ ದಿನದಂದು ನಡೆಯುವ ನೀರಾಟ ಇಡೀ ರಾಜ್ಯದಲ್ಲೆ ಜಾತ್ರಾ ವಿಶೇಷಗಳಲ್ಲಿ ಒಂದು. ಗ್ರಾಮಸ್ಥರು ಹಾಗೂ ಬೇರೆ ಬೇರೆ ಕಡೆಗಳಿಂದ ಬರುವ ಭಕ್ತರು ಒಬ್ಬರಿಗೊಬ್ಬರು ನೀರನ್ನ ಎರಚುವ ಮೂಲಕ ಈ ಆಚರಣೆಯನ್ನ ಮಾಡುತ್ತಾರೆ. ಸುಡುಬಿಸಿಲಲ್ಲಿ ನಡೆಯುವ ನೀರೆರಚಾಟ ಹೊಸವರ್ಷಕ್ಕೆ ಹೊಸತನವನ್ನ ತರುವ ಆಚರಣೆಯಾಗಿದೆ. ದೇವಸ್ಥಾನದ ಕಾರ್ಯದಲ್ಲಿ ಎಲ್ಲಾ ಜಾತಿ, ಧರ್ಮದ ಭಕ್ತರು ಭಾಗವಹಿಸುವುದು ಇಲ್ಲಿನ ಮತ್ತೊಂದು ವಿಶೇಷ.
Advertisement
ಜಾತ್ರೆಯ ಹಿನ್ನೆಲೆ: 800 ವರ್ಷಗಳ ಹಿಂದೆ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಿಂದ ಲಕ್ಷ್ಮಿರಂಗನಾಥ ಸ್ವಾಮಿಯನ್ನ ಜಾಲಹಳ್ಳಿಗೆ ಕರೆತರಲಾಯಿತು ಅನ್ನೋ ಪ್ರತೀತಿ ಇದೆ. ಈ ವೇಳೆ ಸುಡುಬಿಸಿಲಲ್ಲಿ ಭಕ್ತರು ನೀರನ್ನ ಎರಚಿ ಸಂಭ್ರಮಾಚರಣೆ ಮಾಡಿದ್ದರ ನೆನಪಿಗಾಗಿ ಈಗಲೂ ಜಾತ್ರೆ ವೇಳೆ ನೀರಾಟ ಆಡಲಾಗುತ್ತಿದೆ. ಡ್ರಮ್‍ಗಟ್ಟಲೇ ನೀರನ್ನ ಸಂಗ್ರಹಿಸಿ ಸಾವಿರಾರು ಜನ ಭಕ್ತರು ನೀರನ್ನ ಪರಸ್ಪರ ಎರಚಿಕೊಂಡು ಸಂಭ್ರಮಿಸುತ್ತಾರೆ. ವಿಷ್ಣುವಿನ ಅವತಾರವಾದ ಶ್ರೀಲಕ್ಷ್ಮಿರಂಗನಾಥ ಸ್ವಾಮಿ ಈ ವೇಳೆ ಬೇಡಿದ ವರವನ್ನ ಕೊಡುತ್ತಾನೆ ಅನ್ನೋ ನಂಬಿಕೆಯಿದೆ.
Advertisement
ಒಟ್ನಲ್ಲಿ ಸಂಪ್ರದಾಯ, ಆಚರಣೆ ಏನೇ ಇರಲಿ ಜನ ಮನೆಯಿಂದ ಹೊರ ಬರಲು ಹಿಂದು ಮುಂದೂ ನೋಡುವಷ್ಟು ಬಿಸಿಲು ಇರುವಾಗ ನೀರಾಟ ಲಕ್ಷ್ಮಿರಂಗನಾಥ ಸ್ವಾಮಿ ಜಾತ್ರೆಗೆ ಕಳೆಕೊಡುತ್ತದೆ. ಬಿಸಿಲಿನ ತಾಪದಿಂದ ಭಕ್ತರು ಸಹ ತಣ್ಣಗಾಗುತ್ತಾರೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದ ಭಕ್ತರು ಈ ಬಾರಿಯ ಜಾತ್ರೆಗೆ ಮೆರಗು ನೀಡಿದರು.