ಬೆಂಗಳೂರು: ನಡೆದಾಡುವ ದೇವರು, ಶತಾಯುಷಿ ಅವರ ಆರೋಗ್ಯ ಸುಧಾರಣೆಗಾಗಿ ವಿವಿಧ ಜಿಲ್ಲೆಯ ದೇವಾಲಯಗಳಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಿದ್ದು, ಅವರಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಸಿದ್ದಗಂಗಾ ಶ್ರೀಗಳ ಆರೋಗ್ಯ ಚೇತರಿಕೆಗೆ ಭಕ್ತರು, ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆಗಾಗಿ ಅಯ್ಯಪ್ಪಸ್ವಾಮಿಗೆ ಮಹಿಳೆಯರು, ಯುವಕರು ಸೇರಿದಂತೆ ಸಿದ್ದಗಂಗಾ ಮಠದ ಭಕ್ತರು ವಿಶೇಷ ಪೂಜೆಯೊಂದಿಗೆ ಅಭಿಷೇಕ ಸಲ್ಲಿಸಿ ಗುಣಮುಖವಾಗುವಂತೆ ಪ್ರಾರ್ಥನೆ ಮಾಡಿ, ಪ್ರಸಾದ ವಿತರಿಸಿದ್ದಾರೆ.
Advertisement
Advertisement
ಇತ್ತ ದಾವಣಗೆರೆಯಲ್ಲಿ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಆರೋಗ್ಯ ಬೇಗನೇ ಚೇತರಿಕೆಯಾಗಲಿ ಎಂದು ಭಕ್ತರು ಉರುಳು ಸೇವೆ ಮಾಡಿದ್ದಾರೆ. ನಗರದ ದುರ್ಗಾಂಬಿಕಾ ದೇವಸ್ಥಾನದ ಬಳಿ ಕರ್ನಾಟಕ ಏಕತಾ ವೇದಿಕೆಯಿಂದ ಇಪ್ಪತ್ತಕ್ಕೂ ಹೆಚ್ಚು ಸಂಘಟನೆಯ ಕಾರ್ಯಕರ್ತರು ಉರುಳು ಸೇವೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಿದ್ದಗಂಗಾ ಶ್ರೀಗಳು ಬೇಗ ಗುಣಮುಖರಾಗುವಂತೆ ನಗರದ ದುರ್ಗಾಂಬಿಕ ದೇವಿಗೆ ಪೂಜೆ ಸಲ್ಲಿಸಿದ್ದಾರೆ.
Advertisement
ರಾಯಚೂರು ಜಿಲ್ಲೆಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳನ್ನ ಮಾಡಲಾಗುತ್ತಿದೆ. ನಗರದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣ ಯುವಸೇನೆ ಯುವಕರು ದೇವರ ಆರೋಗ್ಯ ವೃದ್ಧಿಯಾಗಲಿ ಅಂತ ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ತೆಂಗಿನಕಾಯಿ ಹೊಡೆದು ಹರಕೆ ಕಟ್ಟಿಕೊಂಡರು. ಮಹಾರುದ್ರಾಭಿಷೇಕ, ಜಲಾಭೀಷೇಕ, ಬಿಲ್ವಾರ್ಚನೆ, ಪುಷ್ಪಾಭಿಷೇಕ ಮೂಲಕ ಪ್ರಾರ್ಥನೆ ಸಲ್ಲಿಸಿದ್ದು, ಸಿಂಧನೂರಿನಲ್ಲಿ ಎಬಿವಿಪಿ ಕಾರ್ಯಕರ್ತರು ಅಂಬಾ ಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಅಂತ ಪ್ರಾರ್ಥಿಸಿದರು.
Advertisement
ಹುಬ್ಬಳ್ಳಿಯ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಿದ್ದಗಂಗಾ ಶ್ರೀಗಳು ಶೀಘ್ರವೇ ಗುಣಮುಖರಾಗಲಿ ಎಂದು ವಿಶೇಷ ಪೂಜೆ ಸಲ್ಲಿಸುವದರ ಜೊತೆಗೆ ಭಾರತ ಸರ್ಕಾರ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಕೂಡಲೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪ್ರಶಸ್ತಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಇತ್ತ ಕೋಲಾರ ನಗರದ ಕೋಲಾರಮ್ಮ ದೇವಾಲಯದಲ್ಲಿ ಶ್ರೀಗಳು ಆರೋಗ್ಯ ಚೇತರಿಸಿಕೊಳ್ಳುವಂತೆ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ 101 ತೆಂಗಿನಕಾಯಿ ಒಡೆದು ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ತುಮಕೂರಿನಲ್ಲಿ ಅಗ್ನಿಹೋತ್ರ ಹೋಮ ಮಾಡುವ ಮೂಲಕ ಸಿದ್ದಗಂಗಾ ಶ್ರೀಗಳ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ತುಮಕೂರು ನಗರದ ಹನುಮಂತಪುರಲ್ಲಿನ ಯೋಗ ಶಿಕ್ಷಣ ಕೇಂದ್ರದಲ್ಲಿ ಕಳೆದ 10 ದಿನದಿಂದ ಪತಂಜಲಿ ಯೋಗ ಶಿಕ್ಷಣ ಹಾಗೂ ಭಕ್ತಾದಿಗಳಿಂದ ಹೋಮ ನಡೆಯುತ್ತಿದೆ. ಈ ಅಗ್ನಿಹೋತ್ರ ಹೋಮ ಒಟ್ಟು 48 ದಿನಗಳ ಕಾಲ ಮಾಡಬೇಕಾಗುತ್ತದೆ. ಇನ್ನೂ ಮಠದ ಮುಂದೆ ಮಕ್ಕಳಿಂದ ಸಂಗೀತದ ಮೂಲಕ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.
https://www.youtube.com/watch?v=G4yFhNq99yQ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv