– ಪುಣ್ಯಸ್ನಾನದಲ್ಲಿ ಮಿಂದೆದ್ದ ಭಕ್ತಸ್ತೋಮ
ಮಡಿಕೇರಿ: ಕೊಡಗಿನ ಕುಲದೇವತೆ ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಸಾವಿರಾರು ಭಕ್ತರಿಗೆ ದರ್ಶನ ನೀಡಿದ್ದಾಳೆ. ಈ ಅಪರೂಪದ ಕ್ಷಣಗಳಿಗೆ ಉಸ್ತುವಾರಿ ಸಚಿವ ವಿ ಸೋಮಣ್ಣ ಕಂದಾಯ ಸಚಿವ ಆರ್ ಅಶೋಕ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಸಾಕ್ಷಿಯಾದರು.
ಅತ್ತ ಭಾವ ಪರವಶರಾಗಿ ಕಾವೇರಿ ಭಕ್ತರು ಸ್ತುತಿಸುತ್ತಿದ್ದರೆ, ಇತ್ತ ಪುರೋಹಿತರು ಮಹಾ ಸಂಕಲ್ಪ ಪೂಜೆ, ಮಹಾಪೂಜೆ ಸಹಸ್ರನಾಮಾರ್ಚನೆ, ಮಹಾಮಂಗಳಾರತಿ ಮಾಡುತ್ತಿದ್ದರು. ನಿಗದಿಯಂತೆ ರೋಹಿಣಿ ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ತೀರ್ಥ ಸ್ವರೂಪಿಣಿಯಾಗಿ ರಾತ್ರಿ 12 ಗಂಟೆ 57 ನಿಮಿಷಕ್ಕೆ ಸರಿಯಾಗಿ ವಿಶ್ವಕ್ಕೆ ತನ್ನ ದರ್ಶನ ನೀಡಿದಳು.
Advertisement
Advertisement
ಭಕ್ತರ ಸಂತಸ ಭಕ್ತಿ ಭಾವಕ್ಕೆ ಪಾರವೇ ಇರಲಿಲ್ಲ. ಅಲೆ ಅಲೆಯಾಗಿ ತೂಗುತ್ತಾ ತೀರ್ಥಕುಂಡಿಕೆಯಿಂದ ಪವಿತ್ರ ಜಲ ಉಕ್ಕಿಬಂದಿದ್ದನ್ನು ಕಂಡ ಭಕ್ತರು “ಜೈ ಜೈಮಾತಾ, ಕಾವೇರಿ ಮಾತಾ” ಎಂದು ಘೋಷ ಮೊಳಗಿಸುತ್ತಾ ಕಾವೇರಿ ಮಾತೆಯ ದರ್ಶನ ಪಡೆದು ಪುನೀತರಾದರು.
Advertisement
Advertisement
ಕಾವೇರಿ ತನ್ನ ಸಹೋದರಿ ಗಂಗೆಯೊಂದಿಗೆ ಸೇರಿ ತುಲಾ ಸಂಕ್ರಮಣದ ಈ ಕಾಲದಲ್ಲಿ ತೀರ್ಥ ಸ್ವರೂಪಿಣಿಯಾಗಿ ಉಕ್ಕಿಬರುತ್ತಾಳೆ. ಈ ಸಮಯದಲ್ಲಿ ತಲಕಾವೇರಿಯಲ್ಲಿ ಪುಣ್ಯಸ್ನಾನ ಮಾಡಿ ತೀರ್ಥ ಸಂಗ್ರಹ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಉಸ್ತುವಾರಿ ಸಚಿವ ವಿ ಸೋಮಣ್ಣ, ಕಂದಾಯ ಸಚಿವ ಆರ್ ಅಶೋಕ್, ವಿರಾಜಪೇಟೆ ಶಾಸಕ ಕೆ. ಜಿ ಬೋಪಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳು ಆಗಮಿಸಿದ್ದರು.
ತೀರ್ಥ ಉದ್ಭವವಾದ ಒಂದು ತಿಂಗಳ ಕಾಲ ತುಲಾ ಸಂಕ್ರಮಣ ಮಹೋತ್ಸವ ನಡೆಯಲಿದ್ದು, ಒಂದು ತಿಂಗಳ ಅವಧಿಯಲ್ಲಿ ಲಕ್ಷಾಂತರ ಭಕ್ತರು ತಲಕಾವೇರಿಗೆ ಭೇಟಿ ನೀಡಿ ತಾಯಿ ಕೃಪೆಗೆ ಪಾತ್ರರಾಗಲಿದ್ದಾರೆ.