ಬೆಂಗಳೂರು: ಖ್ಯಾತ ವೈದ್ಯ ಹಾಗೂ ನಾರಾಯಣ ಹೃದಯಾಲಯ ಸಂಸ್ಥಾಪಕ ಡಾ.ದೇವಿ ಶೆಟ್ಟಿ ಅವರ ಮನೆಯಲ್ಲಿ ಕಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮನೆಗೆಲಸದವರೇ ಈ ಕೃತ್ಯ ಎಸಗಿದ್ದಾರೆ ಎಂಬ ಅಚ್ಚರಿಯ ಸಂಗತಿ ಬಹಿರಂಗವಾಗಿದೆ.
ಮನೆಗೆಲಸ ಮಾಡುತ್ತಿದ್ದ ದಿವ್ಯಾ ಹಾಗೂ ಅನುಪಮಾ ದೇವಿ ಬಂಧಿತ ಆರೋಪಿಗಳು. ದೇವಿ ಶೆಟ್ಟಿಯವರ ಮಗ ಅನೀಶ್ ಶೆಟ್ಟಿಯವರಿಗೆ ಸೇರಿದ ಕೋರಮಂಗಲದಲ್ಲಿರುವ ಮನೆಯಿಂದ ಚಿನ್ನಾಭರಣ ಹಾಗೂ ವಜ್ರದ ಅಭರಣಗಳನ್ನು ಕಳ್ಳತನ ಮಾಡಿದ್ದಾರೆ.
ಅನುಪಮಾ ಹಾಗೂ ದಿವ್ಯ ದೇವಿ ಶೆಟ್ಟಿಯವರ ಮನೆಯಲ್ಲಿ ಕೆಲಸಕ್ಕೆ ಇದ್ದರು. ಆದರೆ ಇತ್ತಿಚಿಗೆ ಇಬ್ಬರೂ ಒಮ್ಮೆಲೇ ಮನೆಗೆಲಸ ಬಿಟ್ಟಿದ್ದರು. ಕೆಲದ ಬಿಡುವ ಸಮಯದಲ್ಲೇ ಅನೀಶ್ ಶೆಟ್ಟಿಯವರ ರೂಂನಲ್ಲಿದ್ದ ಕಬೋರ್ಡ್ ನಲ್ಲಿನ ಚಿನ್ನಾಭರಣ ಹಾಗೂ ವಜ್ರದ ಆಭರಣಗಳು ಕಳ್ಳತನವಾಗಿತ್ತು.
ಈ ಸಂಬಂಧ ಅಕ್ಟೋಬರ್ 31ರಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅನುಮಾನದ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.
ಅಕ್ಟೋಬರ್ 26ರಂದು ಬೆಳಗ್ಗೆ 9 ಗಂಟೆಗೆ ನಮ್ಮ ಬಾಸ್(ದೇವಿ ಶೆಟ್ಟಿ) ಮಗ ಅನೀಶ್ ಶೆಟ್ಟಿ ಅವರ ರೂಂ ಕಬೋರ್ಡ್‍ನಲ್ಲಿ ಇದ್ದ ಗೋಲ್ಟ್ ಪೆಂಡೆಂಟ್, ಕೊಲಂಬಿಯಾದ ಸ್ಮಾಲ್ ಎಮೆರಾಲ್ಡ್ ಸ್ಟೋನ್, ಆ್ಯಂಕ್ಲೆಟ್ ವೆಡ್ಡಿಂಗ್, ಬ್ರಾಸ್‍ಲೆಟ್ ವಿತ್ ರೂಬಿ ಆ್ಯಂಡ್ ಎಮೆರಾಲ್ಡ್, ಕ್ಲಾ ಪೆಂಡೆಂಟ್ ವಿತ್ ಚೈನ್, ಗಂಜಂ ಬ್ರಾಸ್‍ಲೆಟ್, ಮದುವೆಯ ಬಂಗಾರದ ಉಂಗುರ, ನಿಶ್ಚಿತಾರ್ಥದ ಬಂಗಾರದ ಉಂಗುರ, ಬಂಗಾರದ ಕಿವಿಯೋಲೆ, ನೆಕ್ಲೆಸ್ ಮತ್ತು ಕಿವಿಯೋಲೆ ಸೆಟ್, ಬಂಗಾರದ ಕಿಯೋಲೆಗಳು, ಪೆಂಡೆಂಟ್ ಹೊಂದಿದ್ದ ಚೈನ್ ಹಾಗೂ ವಜ್ರದ ನ್ರಾಸ್‍ಲೆಟ್ ಸೇರಿದಂತೆ ಚಿನ್ನದ ಮತ್ತು ವಜ್ರದ ಆಭರಣಗಳು ಕಾಣೆಯಾಗಿದೆ. ಮನೆಗೆಲಸಕ್ಕೆ ಇದ್ದ ದಿವ್ಯಾ ಮತ್ತು ಅನುಪಮಾ ಕಳ್ಳತನ ಮಾಡಿರಬಹುದೆಂದು ಅನುಮಾನವಿದ್ದು, ಅವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಬೇಕೆಂದು ದೂರು ನೀಡಲಾಗಿತ್ತು.