Connect with us

Latest

ಪಾನ್ ಕಾರ್ಡ್ ನಲ್ಲಿರೋ 10 ಸಂಖ್ಯೆಗಳು ಏನನ್ನು ಸೂಚಿಸುತ್ತೆ? ಅರ್ಜಿ ಸಲ್ಲಿಸೋದು ಹೇಗೆ?

Published

on

ಭಾರತದ ನಾಗರೀಕರೇ ಆಗಲಿ ಅಥವಾ ಅನಿವಾಸಿ ಭಾರತೀಯರೇ(ಎನ್‍ಆರ್‍ಐ) ಆಗಿದ್ದರೂ ಭಾರತದಲ್ಲಿ ಆದಾಯ ತೆರಿಗೆ ಪಾವತಿ ಮಾಡಲು ಅಥವಾ ಹಣಕಾಸು ವ್ಯವಹಾರಗಳನ್ನು ಸಮಗ್ರವಾಗಿ ನಿರ್ವಹಿಸಲು ಪಾನ್ ಕಾರ್ಡ್ ಅತ್ಯವಶ್ಯಕ. ಇಂದಿನ ದಿನಗಳಲ್ಲಿ ಪಾನ್‍ಕಾರ್ಡ್ ಕೇವಲ ಆದಾಯ ತೆರಿಗೆ ಪಾವತಿಗೆ ಮಾತ್ರವಲ್ಲದೇ, ಅನೇಕ ರೀತಿಯ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಹಾಗಾದರೇ ಈ ಪಾನ್ ಕಾರ್ಡ್ ಎಂದರೇನು? ಅದರಿಂದ ಏನು ಉಪಯೋಗ? ಪಾನ್ ಕಾರ್ಡ್ ನಂಬರ್ ಹೇಗೆ ರಚಿಸಲ್ಪಡುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಪಾನ್ ಕಾರ್ಡ್ ಎಂದರೇನು?
ಭಾರತದ ಆದಾಯ ತೆರಿಗೆ ಇಲಾಖೆ ನೀಡುವ 10 ಅಂಕಿಗಳುಳ್ಳ ಪರ್ಮನೆಂಟ್ ಅಕೌಂಟ್ ನಂಬರ್ ಅನ್ನು ಸಂಕ್ಷಿಪ್ತವಾಗಿ ಪಾನ್ ಕಾರ್ಡ್ ಎಂದು ಕರೆಯಲಾಗುತ್ತದೆ. ಈ ಪಾನ್ ಕಾರ್ಡ್ ನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ ಅಂಕೆಗಳನ್ನು ನೀಡಲಾಗಿರುತ್ತದೆ. ಇದೊಂದು ಶಾಶ್ವತ ನಂಬರ್ ಆಗಿದ್ದು, ಒಂದು ವೇಳೆ ನಿಮ್ಮ ವಿಳಾಸ ಬದಲಾವಣೆ ಆದರೂ ಸಹ ಯಾವುದೇ ಪರಿಣಾಮ ಬೀರುವುದಿಲ್ಲ.

ಪಾನ್ ಕಾರ್ಡನ್ನು ಯಾರಿಗೂ ವರ್ಗಾಯಿಸಲು ಸಾಧ್ಯವಿಲ್ಲ. ಇದು ಯುನಿವರ್ಸಲ್ ಗುರುತಿನ ಚೀಟಿಯ ಹಾಗೆ ಕಾರ್ಯನಿರ್ವಹಿಸುತ್ತದೆ. ಆದಾಯ ತೆರಿಗೆ ಪಾವತಿ ಹಾಗೂ ಹಣಕಾಸು ವ್ಯವಹಾರಗಳು ಈ ಖಾತೆ ಸಂಖ್ಯೆಯ ಆಧಾರದ ಮೇಲೆಯೇ ನಡೆಯುತ್ತದೆ. ಸದ್ಯ ಪಾನ್ ಕಾರ್ಡ್ ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಕಡ್ಡಾಯವಾಗಿ ಬೇಕಾಗಿದೆ.

ಏನೇನು ಇರುತ್ತದೆ?
ಪಾನ್ ಕಾರ್ಡಿನ ಮೊದಲನೇ ಸಾಲಿನಲ್ಲಿ ವ್ಯಕ್ತಿಯ ಸಂಪೂರ್ಣ ಹೆಸರು, ಎರಡನೇ ಸಾಲಿನಲ್ಲಿ ಆಕೆಯ/ಆತನ ತಂದೆ ಹಾಗೂ ಪೋಷಕರ ಹೆಸರು. ಮೂರನೇ ಸಾಲಿನಲ್ಲಿ ಜನ್ಮದಿನಾಂಕ. ನಾಲ್ಕನೇ ಸಾಲಿನಲ್ಲಿ 10 ಅಂಕಿಗಳ ಪರ್ಮನೆಂಟ್ ಅಕೌಂಟ್ ನಂಬರ್ ಹಾಗೂ ಐದನೇ ಸಾಲಿನಲ್ಲಿ ಪಾನ್ ಕಾರ್ಡ್ ಅರ್ಜಿದಾರರ ಸಹಿ ಹಾಗೂ ಅವರ ಭಾವಚಿತ್ರ ಮುದ್ರಿತವಾಗಿರುತ್ತದೆ. ಇದಲ್ಲದೇ ಆದಾಯ ತೆರಿಗೆ ಇಲಾಖೆಯ ಹಾಲೋಗ್ರಾಮ್ ಸಹ ಇರುತ್ತದೆ. ಒಂದು ವೇಳೆ ಸಂಸ್ಥೆಗಳು ಪಾನ್ ಕಾರ್ಡ್ ಪಡೆದುಕೊಂಡಿದ್ದರೆ, ಅದರಲ್ಲಿ ಸಂಸ್ಥೆಯ ಹೆಸರು, ನೋಂದಣಿ ದಿನಾಂಕ ಹಾಗೂ ಇತರೆ ಮಾಹಿತಿಗಳು ಮುದ್ರಿತವಾಗಿರುತ್ತವೆ.

ಪಾನ್ ಕಾರ್ಡ್ ಸಲ್ಲಿಸಲು ಏನೇನು ಬೇಕು?
ಇತ್ತೀಚಿನ ಎರಡು ಪಾಸ್‍ಪೋರ್ಟ್ ಸೈಜಿನ ಭಾವಚಿತ್ರ ಹಾಗೂ ಎಸ್‍ಎಸ್‍ಎಲ್‍ಸಿ ಪ್ರಮಾಣ ಪತ್ರ, ನೋಂದಾಯಿತ ಶಿಕ್ಷಣ ಸಂಸ್ಥೆಯಿಂದ ಪದವಿ ಪ್ರಮಾಣ ಪತ್ರ, ಕ್ರೆಡಿಟ್ ಕಾರ್ಡ್, ಬ್ಯಾಂಕ್ ಸ್ಟೇಟ್ ಮೆಂಟ್, ರೇಶನ್ ಕಾರ್ಡ್, ಚಾಲನಾ ಪರವಾನಗಿ, ಮತದಾನ ಗುರುತಿನ ಚೀಟಿ, ಪಾಸ್ ಪೋರ್ಟ್ ಹಾಗೂ ಆಧಾರ್ ಕಾರ್ಡ್ ಗಳು ಬೇಕು. ಅಲ್ಲದೇ ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸ ಬೇಕಾದರೆ ಈ ಮೇಲ್ಕಂಡ ಕನಿಷ್ಠ ಎರಡು ಗುರುತಿನ ಚೀಟಿ ಮತ್ತು ವಿಳಾಸ ದೃಢಿಕರಣವನ್ನು ಕಡ್ಡಾಯವಾಗಿ ನೀಡಲೇ ಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
ಪಾನ್ ಕಾರ್ಡ್ ಅನ್ನು ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಇದರಲ್ಲಿ ವಯಸ್ಸು ಮತ್ತು ರಾಷ್ಟ್ರೀಯತೆ ಬರುವುದಿಲ್ಲ. ಒಂದು ವೇಳೆ ಮಕ್ಕಳ ಹೆಸರಿನಲ್ಲಿ ಪಾನ್ ಕಾರ್ಡ್ ಮಾಡಿಸಬೇಕಾದರೆ ಪೋಷಕರ ರುಜು ಕಡ್ಡಾಯವಾಗಿರುತ್ತದೆ. ಪಾನ್ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಆದಾಯ ತೆರಿಗೆಯ ಜಾಲತಾಣ (www.tin-nsdl.com) ಹಾಗೂ ಆದಾಯ ತೆರಿಗೆ ಇಲಾಖೆ ನಿಗದಿಪಡಿಸಿದ ಸಂಸ್ಥೆಗಳ ಮೂಲಕ ಆನ್‍ಲೈನ್ ಅಥವಾ ಆಪ್‍ಲೈನ್ ಮೂಲಕ ಅರ್ಜಿಸಲ್ಲಿಸಬಹುದು.

10 ಸಂಖ್ಯೆಗಳು ಏನನ್ನು ಸೂಚಿಸುತ್ತವೆ?
ಪಾನ್ ಕಾರ್ಡಿನ ಮೊದಲ 5 ಇಂಗ್ಲೀಷಿನ ಅಕ್ಷರಗಳನ್ನು ಕೋರ್ ಗುಂಪುಗಳೆಂದು ಕರೆಯುತ್ತಾರೆ. ಇದರಲ್ಲಿನ ಮೊದಲನೇ 3 ಅಕ್ಷರಗಳು `ಎ’ ಇಂದ `ಝೆಡ್’ ವರೆಗೆ ಸಾಮಾನ್ಯವಾಗಿ ಇರುತ್ತವೆ. 4ನೇ ಅಕ್ಷರವು ಪಾನ್ ಕಾರ್ಡ್ ಯಾವುದಕ್ಕೆ ಸಂಬಂಧಪಟ್ಟಿದೆ ಎಂಬುದನ್ನು ತೋರಿಸುತ್ತದೆ. ಸಿ-ಕಂಪನಿ, ಪಿ- ವ್ಯಕ್ತಿ, ಎಚ್-ಹಿಂದೂ ಅವಿಭಕ್ತ ಕುಟುಂಬ, ಎಫ್- ವಿಭಾಗ, ಎ-ವ್ಯಕ್ತಿಗಳ ಗುಂಪು, ಟಿ-ಟ್ರಸ್ಟ್, ಬಿ-ವ್ಯಕ್ತಿಯ ಗುರುತು, ಎಲ್-ಸ್ಥಳೀಯ ಸಂಸ್ಥೆಗಳು, ಜೆ-ಕಾನೂನು ಪ್ರಕಾರ ವ್ಯಕ್ತಿ ಎಂದು ಪರಿಗಣಿಸಿರುವುದು, ಜಿ-ಸರ್ಕಾರ ಆಗಿರುತ್ತದೆ. ಅಲ್ಲದೇ 5ನೇ ಅಕ್ಷರ ವ್ಯಕ್ತಿಯ ಹೆಸರಿನ ಮೊದಲನೇ ಅಕ್ಷರವಾಗಿರುತ್ತದೆ. ಇದಲ್ಲದೇ 6 ರಿಂದ 9ನೇ ಸ್ಥಾನದಲ್ಲಿ ಬರುವ ಅಂಕಿಗಳು 0001 ರಿಂದ 9999ರವರೆಗಿನ ಸರಣಿ ಸಂಖ್ಯೆಗಳಾಗಿರುತ್ತವೆ. ಕೊನೆಯ ಇಂಗ್ಲೀಷಿನ ಸಂಖ್ಯೆ ಅಂಕಿಗಳನ್ನು ಪ್ರತಿನಿಧಿಸುವ ಅಕ್ಷರವಾಗಿರುತ್ತದೆ.

ಉದಾಹರಣೆಗೆ ABCPS1234A ಆಗಿದೆ.

ಪಾನ್ ಕಾರ್ಡಿನ ಉಪಯೋಗವೇನು?
ಪಾನ್ ಕಾರ್ಡ್ ನ್ನು ಬ್ಯಾಂಕ್ ಖಾತೆ ತೆರೆಯಲು, ಐಟಿ ರಿಟರ್ನ್ಸ್, ಆಸ್ತಿ ಮತ್ತು ವಾಹನ ಮಾರಾಟ ಹಾಗೂ ಖರೀದಿ ವೇಳೆ, ಷೇರು ಮತ್ತು ಮ್ಯೂಚುವಲ್ ಫಂಡ್‍ಗಳಲ್ಲಿ ಹಣ ಹೂಡಿಕೆ ಮಾಡುವ ವೇಳೆ ಹಾಗೂ ಇನ್ನೂ ಅನೇಕ ಸಂದರ್ಭದಲ್ಲಿ ಉಪಯೋಗ ಮಾಡಿಕೊಳ್ಳಬಹುದು. ಇದಲ್ಲದೇ ಪಾನ್ ಕಾರ್ಡನ್ನು ಗುರುತಿನ ಚೀಟಿಯಾಗಿರೂ ಸಹ ಬಳಕೆ ಮಾಡಬಹುದಾಗಿದೆ.

ಪಾನ್ ಕಾರ್ಡ್ ಮೇಲೆ ಜನರಲ್ಲಿರುವ ಅಪನಂಬಿಕೆಗಳೇನು?
ಜನರು ಪಾನ್ ಕಾರ್ಡನ್ನು ಕೇವಲ ತೆರಿಗೆ ಪಾವತಿ ಮಾಡಲು ಬಳಸುತ್ತಾರೆ ಎನ್ನುವ ಅಪನಂಬಿಕೆಯನ್ನು ಹಲವರು ನಂಬಿಕೊಂಡಿದ್ದಾರೆ.

ಆಧುನಿಕ ಸಮಾಜದ ರೀತಿ ನೀತಿಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕಾದರೆ ಪಾನ್ ಕಾರ್ಡ್ ಅತ್ಯಗತ್ಯ. ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲದಿದ್ದರೆ ಕೂಡಲೆ ಅರ್ಜಿ ಹಾಕುವುದು ಉತ್ತಮ. ಒಂದು ಬಾರಿ ಸ್ವಲ್ಪ ಸಮಯವನ್ನು ಮೀಸಲಿಟ್ಟು ಈ ಕಾರ್ಡ್ ಮಾಡಿಸಿದರೆ, ಮುಂದಿನ ದಿನಗಳಲ್ಲಿ ಈ ಕಾರ್ಡ್ ಮೂಲಕ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *