ರಾಯಚೂರು: ಈ ಬಾರಿಯ ಮುಂಗಾರು ಮಳೆ(Monsoon Rains) ಉತ್ತಮವಾಗಿದ್ದರಿಂದ ರಾಯಚೂರು(Raichuru) ಜಿಲ್ಲೆಯಾದ್ಯಂತ ಭತ್ತದ(Paddy) ಬೆಳೆ ಭರ್ಜರಿಯಾಗಿ ಬಂದಿದೆ. ಆದರೆ ಈ ರೈತರ(Farmers) ದುರಾದೃಷ್ಟವೆಂದರೆ ಅಕಾಲಿಕವಾಗಿ ಎರಡು ದಿನ ಸುರಿದ ಅಲ್ಪ ಮಳೆಗೆ ಭತ್ತ ಹಾನಿಯಾಗಿದೆ. ಮಾರುಕಟ್ಟೆಗೆ ಹೋಗಬೇಕಾದ ಭತ್ತವನ್ನು ಬಿಸಿಲಿಗೆ ಒಣಗಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಈ ವರ್ಷವೂ ಕೃಷ್ಣಾ(Krishna) ಹಾಗೂ ತುಂಗಭದ್ರಾ(Tungabhadra) ನೀರಾವರಿ ಆಶ್ರಿತ ಪ್ರದೇಶದಲ್ಲಿ ಭರ್ಜರಿಯಾಗಿ ಭತ್ತವನ್ನು ಬೆಳೆಯಲಾಗಿದೆ. 9.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಮಾಡಿದ್ದು 49.82 ಲಕ್ಷ ಟನ್ ಭತ್ತದ ಉತ್ಪಾದನೆಯ ನಿರೀಕ್ಷೆಯಿದೆ. ಆದರೆ ರಾಯಚೂರು ಹಾಗೂ ಮಾನ್ವಿ ತಾಲೂಕಿನಲ್ಲಿ ಮೂರ್ನಾಲ್ಕು ದಿನಗಳ ಕೆಳಗೆ ಎರಡು ದಿನಕಾಲ ಸುರಿದ ಮಳೆ ಸಾವಿರಾರು ಎಕರೆ ಬೆಳೆಯನ್ನು ಹಾಳು ಮಾಡಿದೆ. ಇನ್ನೇನು ಒಂದೆರಡು ದಿನದಲ್ಲಿ ಕಟಾವಿಗೆ ಸಿದ್ದವಾದ ಬೆಳೆ ನೆಲಕ್ಕಚ್ಚಿದೆ. ಈಗಾಗಲೇ ಕಟಾವ್ ಆಗಿ ಬಯಲಿಗೆ ಒಣಗಲು ಹಾಕಿದ್ದ ಬೆಳೆ ಮಳೆಯಿಂದ ಪುನಃ ಒದ್ದೆಯಾಗಿದೆ. ಇದರಿಂದ ಬೆಳೆಹಾಳಾಗಿದ್ದು , ಉಳಿದ ಭತ್ತವೂ ಸಹ ಗುಣಮಟ್ಟ ಕಳೆದುಕೊಂಡಿದೆ.
ಭತ್ತ ಒದ್ದೆಯಾಗಿರುವುದರಿಂದ ನುಚ್ಚಾಗುವ ಸಾಧ್ಯತೆ ಹೆಚ್ಚಿರುವುದರಿಂದ ರೈತರು ನಷ್ಟ ಅನುಭವಿಸಿದ್ದಾರೆ. ಅಲ್ಲದೆ ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ ರೈತರು ಕೃಷಿ ಮಾರುಕಟ್ಟೆ ಲಗ್ಗೆಯಿಟ್ಟು ತಮ್ಮ ಭತ್ತ ಮಾರಾಟ ನಡೆಸಿರುವುದರದಿಂದ ಜಿಲ್ಲೆಯ ರೈತರು ಬೆಲೆ ಕುಸಿತದ ಭೀತಿಯನ್ನೂ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಐಪಿಎಲ್‍ಗೆ ನಿವೃತ್ತಿ ಘೋಷಿಸಿದ ಬ್ರಾವೋ – ಚೆನ್ನೈ ತಂಡದಲ್ಲಿ ಮುಂದುವರಿಕೆ
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ಆರ್‌ಎನ್ಆರ್ ಭತ್ತಕ್ಕೆ ಕ್ವಿಂಟಾಲ್‌ಗೆ 2,300 ರೂ.ವರೆಗೆ ಬೆಲೆ ಸಿಗುತ್ತಿದೆ. ಇನ್ನೂ ಸೋನಾಮಸೂರಿ 1,600 ರೂಪಾಯಿ ಕ್ವಿಂಟಾಲ್ ಮಾರಾಟವಾಗುತ್ತಿದೆ. ಈ ಬಾರಿ ಬೆಲೆ ಉತ್ತಮವಾಗಿರುವುದರಿಂದ ರೈತರು ಲಾಭದ ನಿರೀಕ್ಷೆಯಲ್ಲಿದ್ದರು.
ಭತ್ತಕ್ಕೆ ವೈಜ್ಞಾನಿಕ ಬೆಲೆಯಿಲ್ಲ, ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಕಷ್ಟಪಟ್ಟು ಬೆಳೆ ಬೆಳೆಯುವ ರೈತರಿಗೆ ಲಾಭದ ಯಾವುದೇ ಗ್ಯಾರಂಟಿಯಿಲ್ಲ ಹೀಗಾಗಿ ಸರ್ಕಾರ ರೈತರ ಕಡೆ ಗಮನಹರಿಸಬೇಕು ಅಂತ ರೈತ ಮುಖಂಡರು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಅನುಭವಿಸಿದ ನಷ್ಟವನ್ನು ಈ ಬಾರಿ ತುಂಬಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ರೈತರಿಗೆ ಪುನಃ ಸಂಕಷ್ಟ ಎದುರಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಭತ್ತ ರೈತರ ಕೈಹಿಡಿಯುವ ನೀರಿಕ್ಷೆ ಮತ್ತೆ ಹುಸಿಯಾಗಿದೆ. ಅಕಾಲಿಕ ಮಳೆಯ ಹೊಡೆತದಿಂದ ತಪ್ಪಿಸಿಕೊಂಡ ರೈತರು ಮಾತ್ರ ನಿಟ್ಟುಸಿರುಬಿಟ್ಟಿದ್ದಾರೆ.