ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ (Siddaramaiah) ಅವರ ತಲೆದಂಡ ಆಗುತ್ತಾ ಎಂಬ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ‘ಪಬ್ಲಿಕ್ ಟಿವಿ’ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೂ, ಲೋಕಸಭಾ ಚುನಾವಣೆಗೂ ತಲೆದಂಡ ಎನ್ನುವ ಪರಿಸ್ಥಿತಿ ಬರುವುದೇ ಇಲ್ಲ. ‘ನಾನು ಇರಬೇಕಾ ಬೇಡವಾ? ಇರಬೇಕು ಅಂದ್ರೆ ವೋಟ್ ಕೊಡಿ’ ಎಂದು ತಮ್ಮ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕೇಳಿದ್ದಾರೆ. ಅವರು ತಮ್ಮ ಕ್ಷೇತ್ರದಲ್ಲಿ ಆ ರೀತಿ ಕೇಳುವುದು ಸ್ವಾಭಾವಿಕ. ಅದರಲ್ಲಿ ತಪ್ಪೇನಿದೆ? ಕೆ.ಆರ್.ಪೇಟೆಯಲ್ಲಿ ಯಡಿಯೂರಪ್ಪ ಹಿಂದೆ ಏನು ಮಾತನಾಡಿದ್ದರು? ನಾನು ಸಿಗ್ನೇಚರ್ ಹಾಕುವ ಕಾಲ ಬರುತ್ತೆ ಎಂದು ಸಿಎಂ ಸ್ಥಾನದ ವಿಚಾರವಾಗಿ ಸದ್ಯ ಇದ್ದ ಗೊಂದಲಕ್ಕೆ ತೆರೆ ಎಳೆದರು. ಇದನ್ನೂ ಓದಿ: Exclusive: ಮೋದಿ ಗ್ಯಾರಂಟಿಯಲ್ಲಿ ರಸವೇ ಇಲ್ಲ: ಡಿ.ಕೆ.ಶಿವಕುಮಾರ್ ವ್ಯಂಗ್ಯ
ಈ ಸಲ ವೋಟ್ ಹಾಕದಿದ್ದರೆ ಸಿದ್ದರಾಮಯ್ಯಗೆ ಕಷ್ಟ ಆಗುತ್ತೆ ಎಂದು ನಿಮ್ಮ ಶಾಸಕರೇ ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಆ ಬಗ್ಗೆ ಚರ್ಚೆ ಮಾಡುವ ಸಂದರ್ಭ ಇದಲ್ಲ. ಶಾಸಕರು ಅವರವರ ಖುಷಿಗೆ ಹಾಗೆ ಮಾತನಾಡಿಕೊಳ್ತಾರೆ. ಸದ್ಯಕ್ಕೆ ಅದು ಪಾಯಿಂಟ್ ಅಲ್ಲ ಎಂದು ಹೆಚ್ಚು ಮಾತನಾಡಲು ನಿರಾಕರಿಸಿದರು. ಈ ಚುನಾವಣೆಯು ಸಿಎಂ, ಡಿಸಿಎಂ ಸ್ಥಾನಕ್ಕೆ ಯಾವುದೇ ರೀತಿಯ ಪರಿಣಾಮ ಬೀರಲ್ಲ. ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ ಎಂದು ತಿಳಿಸಿದರು.
ಬಿಜೆಪಿ ಎಷ್ಟು ವೀಕ್ ಆಗಿದೆ ಗೊತ್ತಾ ನಿಮಗೆ? ಯಾರ ಮೇಲೆ ಆರೋಪ ಮಾಡಿದರೊ, ಯಾವ ಸಿಎಂ (ಯಡಿಯೂರಪ್ಪ) ಕಣ್ಣೀರಿಟ್ಟು ಸ್ಥಾನದಿಂದ ಇಳಿಯುವಂತೆ ಮಾಡಿದರೊ, ಅವರಿಗೆ ಮತ್ತೆ ನೀನು ಅಧಿಕಾರ ನಡೆಸಪ್ಪ ಅಂತ ಕೊಟ್ಟಿದ್ದಾರೆ. ಯಾರ ಮೇಲೆ ದೊಡ್ಡ ದೊಡ್ಡ ಕೇಸ್ ಹಾಕಿಸಿದ್ದರೋ, ಯಾರ ಮನೆ ಮೇಲೆ ದಾಳಿ ಮಾಡಿದರೊ, ಯಾರ ಮೇಲೆ ಆರೋಪಗಳನ್ನು ಮಾಡಿದರೊ, ಯಾರನ್ನು ಈತ ಭ್ರಷ್ಟ ಎಂದು ಹೇಳಿದರೊ ಅವರನ್ನೇ ತಬ್ಬಿಕೊಳ್ಳುತ್ತಿದ್ದಾರೆ ಬಿಜೆಪಿಯವರು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಮೈತ್ರಿ ಮುನಿಸು – ಭಾನುವಾರ ಮೈಸೂರಿನಲ್ಲಿ ಪ್ರಜ್ವಲ್ ರೇವಣ್ಣ, ಪ್ರೀತಂಗೌಡ ಮುಖಾಮುಖಿ
ಮೈಸೂರು, ಮಂಡ್ಯ, ಬೆಂಗಳೂರಲ್ಲಿ ಸದಾನಂದಗೌಡ, ಕೊಪ್ಪಳ, ಕೋಲಾರ, ಚಿಕ್ಕಮಗಳೂರು ಸೀಟ್ ಕೊಡಲಿಲ್ಲ. ಇವರು ಸೀಟ್ ಕೊಡದೇ ಅವರ ನಾಯಕರಲ್ಲಿ ಸತ್ವ ಇಲ್ಲ ಎಂಬಂತಾಯಿತು. ಅವರ ಎಂಪಿಗಳು ಸರಿಯಾಗಿ ಕೆಲಸ ಮಾಡಲಿಲ್ಲ ಅಂತ ಅರ್ಥ ಅಲ್ಲವಾ? ಅದಕ್ಕಾಗಿ ತಾನೇ ಅವರು ಹೊಸ ಮುಖಗಳನ್ನು ಹುಡುಕಿರುವುದು? ಬಿಜೆಪಿ ಕಾರ್ಯಕರ್ತರು, ನಾಯಕರು ಮತ್ತು ನಾಯಕತ್ವ ಎಷ್ಟು ವೀಕ್ ಆಗಿದೆ ಎಂಬುದನ್ನು ಇದರ ಮೂಲಕ ಅರಿಯಬೇಕು ಎಂದು ತಿಳಿಸಿದರು.