– ಸಾವಿಗೆ ನಮ್ಮ ಸ್ವಾಭಿಮಾನವೇ ಕಾರಣ
– ನಾನೂ ನನ್ನ ಮಕ್ಕಳು ಯಾರಿಗೂ ಭಾರವಾಗುವುದಿಲ್ಲ
– ಕುಟುಂಬವನ್ನು ಸರ್ವನಾಶ ಮಾಡಿದ ಕೊರೊನಾ
ಬೆಂಗಳೂರು: ನನ್ನ ಪತಿ ಇಲ್ಲದ ಮೇಲೆ ನಾವು ಬದುಕಿ ಪ್ರಯೋಜನವಿಲ್ಲ. ನಾನೂ ನನ್ನ ಮಕ್ಕಳು ಯಾರಿಗೂ ಭಾರವಾಗುವುದಿಲ್ಲ. ನಮ್ಮ ಸಾವಿಗೆ ನಮ್ಮ ಸ್ವಾಭಿಮಾನವೇ ಕಾರಣ ಎಂದು ಡೆತ್ ನೋಟ್ ಬರೆದು ವಸಂತ ತನ್ನ ಮಕ್ಕಳ ಜೊತೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆಲಮಂಗಲದ ಮಾದನಾಯಕನ ಹಳ್ಳಿ ಬಳಿಯ ಪ್ರಕೃತಿ ಬಡಾವಣೆ ವಸಂತ(40), ಯಶವಂತ್ (15) ಹಾಗೂ ನಿಶ್ಚಿತಾ (6) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ರೂಮಿನಲ್ಲಿ ಮಗ ಇನ್ನೊಂದು ಕೊಠಡಿಯಲ್ಲಿ ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಿಂದ ಯಾರೂ ಹೊರಬರುತ್ತಿಲ್ಲ ಎಂದು ಸಂಶಯಗೊಂಡು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಾದನಾಯಕನ ಹಳ್ಳಿ ಪೊಲೀಸರು ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಿಎಂಟಿಸಿ ಪೀಣ್ಯ ಡಿಪೋದಲ್ಲಿ ನಿರ್ವಾಹಕರಾಗಿದ್ದ ಪತಿ ಪ್ರಸನ್ನಕುಮಾರ್ ವರ್ಷದ ಹಿಂದೆ ಕೊರೊನಾದಿಂದ ಮೃತಪಟ್ಟಿದ್ದರು. ಪ್ರಸನ್ನಕುಮಾರ್ ಸಾವಿನ ಜಿಗುಪ್ಸೆಯಲ್ಲೇ ಮೂವರು ಆತ್ಮಹತ್ಯೆಗೆ ಶರಣಾಗಿದ್ದು ಮನೆಯಲ್ಲಿ ವಸಂತ ಬರೆದ ಡೆತ್‍ನೋಟ್ ಸಿಕ್ಕಿದೆ
ಡೆತ್‍ನೋಟ್‍ನಲ್ಲಿ ಏನಿದೆ?
ಮಕ್ಕಳನ್ನು ಬಿಟ್ಟು ನಾನು ಒಬ್ಬಳೇ ಸಾಯಲು ತಯಾರಿಲ್ಲ. ಮನೆ ಖರೀದಿಗೆ ಸಾಲ ಮಾಡಿದ್ದೇವೆ. ಮನೆಯನ್ನು ಮಾರಾಟ ಮಾಡಿ ಸಾಲ ತೀರಿಸಿ. ಉಳಿದ ಹಣವನ್ನು ಅನಾಥಾಶ್ರಮಕ್ಕೆ ನೀಡಿ ಎಂದು ವಸಂತಾ 2 ಪುಟಗಳ ಡೆತ್‍ನೋಟ್ ಬರೆದಿದ್ದಾರೆ.
ಮನೆ ಖರೀದಿಗೆ ಬ್ಯಾಂಕ್ ಸಾಲ ಹಾಗೂ ಬಡ್ಡಿಗೆ ಸಾಲ ಪಡೆದಿದ್ದರು. ಅರ್ಧದಷ್ಟು ಮನೆ ಸಾಲವನ್ನು ಪ್ರಸನ್ನಕುಮಾರ್ ತೀರಿಸಿದ್ದರು. ಆದರೆ ಪತಿಯ ಹಠಾತ್ ಸಾವಿನಿಂದ ನೊಂದು ವಸಂತ ಮನೆಯಲ್ಲೇ ಏಕಾಂಗಿಯಾಗಿರುತ್ತಿದ್ದರು. ಅಕ್ಕಪಕ್ಕದವರ ಜೊತೆಗೆ ಮಾತನಾಡುವುದನ್ನ ಬಿಟ್ಟಿದ್ದ ವಸಂತ ಯಾವಾಗಲು ಮಕ್ಕಳ ಬಳಿ ಸಾವಿನ ಬಗ್ಗೆಯೇ ಹೇಳುತ್ತಿದ್ದರು. ವಸಂತಗೆ ಹಲವು ಬಾರಿ ಅವರ ತಾಯಿ, ತಮ್ಮ ಸಮಾಧಾನ ಮಾಡಿದ್ದರು. ಇದನ್ನೂ ಓದಿ: ನಟ ವಿವೇಕ್‍ಗೆ ಉರುಳಾಗುತ್ತಾ ಸೌಜನ್ಯ ಜೊತೆಗಿನ ಲವ್?
ಆತ್ಮಹತ್ಯೆಗೆ ಯತ್ನಿಸಿದ್ರು:
ಈ ಮೊದಲು 3 ಬಾರಿ ಸೂಸೈಡ್‍ಗೆ ತಾಯಿ, ಮಕ್ಕಳು ಯತ್ನಿಸಿದ್ದರು. 2 ತಿಂಗಳ ಹಿಂದೆ ಹೆಸರುಗಟ್ಟೆ ಕೆರೆ ಬಳಿ ಆತ್ಮಹತ್ಯೆಗೆ ವಸಂತ ಪ್ರಯತ್ನಿಸಿದ್ದರು. ಆಗ ಮಗಳು ಕಿರುಚಾಡಿದ್ದರಿಂದ ಸಾರ್ವಜನಿಕರು ಕಾಪಾಡಿದ್ದರು. ಶುಕ್ರವಾರ ಆತ್ಮಹತ್ಯೆಗೆ ಶರಣಾಗುವ ಮುನ್ನ ಮನೆಯನ್ನು ಲಾಕ್ ಮಾಡಿದ್ದರು. ಆರಂಭದಲ್ಲಿ ಮಗನಿಗೆ ನೇಣು ಹಾಕಿಕೊಳ್ಳಲು ಪ್ರಚೋದಿಸಿದ ಬಳಿಕ ಇನ್ನೊಂದು ಕೊಠಡಿಯಲ್ಲಿ ಮಗಳಿಗೆ ನೇಣು ಹಾಕಿ ಕೊನೆಗೆ ವಸಂತ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮದುವೆಯಾಗಿ 17 ವರ್ಷವಾಗಿದ್ದರೂ ತುಂಬಾ ಅನ್ಯೋನ್ಯವಾಗಿದ್ದ ವಸಂತ, ಪ್ರಸನ್ನಕುಮಾರ್ ದಂಪತಿ ಸ್ವಂತ ಮನೆ ಕಟ್ಟಿಕೊಂಡು ಸುಖದ ಜೀವನ ನಡೆಸುತಿದ್ದರು. ಮೈಸೂರು ಮೂಲದವರಾದ ಇಬ್ಬರೂ ಕೂಡ ಸಂಬಂಧಿಗಳು ಎಂಬ ವಿಚಾರ ಈಗ ತಿಳಿದುಬಂದಿದೆ.
ಶನಿವಾರ ಬೆಳಗ್ಗೆ ಬೆಳಗ್ಗೆ 9 ಗಂಟೆಯ ನಂತರ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗುತ್ತದೆ.