– ಠೇವಣಿ ವಿಮೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ; ಠೇವಣಿದಾರರಿಗೆ ಹೇಗೆ ಸಹಾಯ ಮಾಡುತ್ತೆ?
ದುಡಿಯುವ ಹಣಕ್ಕೆ ಸುರಕ್ಷಿತೆ ಬೇಕು, ಅದನ್ನು ಲಾಭದಾಯಕವಾಗಿ ಪರಿವರ್ತಿಸಬೇಕು ಎಂಬ ಉದ್ದೇಶದಿಂದ ಜನರು ಬ್ಯಾಂಕ್‌ಗಳಲ್ಲಿ ಠೇವಣಿ ಇಡುತ್ತಾರೆ. ಠೇವಣಿ ಇಟ್ಟರೂ ಕೆಲವೇ ಲಕ್ಷಕ್ಕೆ ಮಾತ್ರ ಬ್ಯಾಂಕ್‌ನಲ್ಲಿ ಗ್ಯಾರಂಟಿ ಎಂಬ ಚಿಂತೆ ಜನರಲ್ಲಿತ್ತು. ಈಗ ಆ ಚಿಂತೆಯನ್ನು ದೂರ ಮಾಡಲು ಸರ್ಕಾರ ಮುಂದಾಗಿದೆ. ಪ್ರಸ್ತುತ ಇರುವ ಠೇವಣಿ ವಿಮಾ ಮಿತಿಯನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಹೆಚ್ಚಿನ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲು ಗ್ರಾಹಕರಿಗೆ ತುಂಬಾ ಅನುಕೂಲ ಆಗಲಿದೆ.
Advertisement
ಏನಿದು ಠೇವಣಿ ವಿಮೆ? ಇದುವರೆಗೆ ಬ್ಯಾಂಕ್‌ನಲ್ಲಿ ಒಬ್ಬ ಗ್ರಾಹಕರಿಗೆ ಎಷ್ಟು ಹಣಕ್ಕೆ ಸುರಕ್ಷತೆ ಇತ್ತು. ಈಗ ಎಷ್ಟು ಹೆಚ್ಚಿಸಲು ಸರ್ಕಾರ ಮುಂದಾಗಿದೆ? ಇದರಿಂದ ಠೇವಣಿದಾರರಿಗೆ ಸಹಾಯವಾಗುತ್ತಾ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.
Advertisement
ಠೇವಣಿ ಎಂದರೇನು?
ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಬ್ಯಾಂಕ್‌ನಲ್ಲಿ ಇರಿಸಲಾಗುವುದ ಹಣದ ಮೊತ್ತ. ಠೇವಣಿಯನ್ನು ಯಾರು ಇಡುತ್ತಾರೋ ಅವರ ಹೆಸರಲ್ಲೇ ಹಣ ಜಮೆ ಆಗಿರುತ್ತದೆ. ಈ ಹಣವನ್ನು ಅವರು ತಮಗೆ ಬೇಕೆಂದಾಗ ಹಿಂತೆಗೆದುಕೊಳ್ಳಬಹುದು. ಅಥವಾ ಬ್ಯಾಂಕ್ ವಹಿವಾಟು ಮೂಲಕ ಬೇರೆಯವರ ಖಾತೆಗೆ ವರ್ಗಾಯಿಸಲೂ ಬಹುದು.
Advertisement
ಠೇವಣಿ ವಿಮೆ ಎಂದರೇನು?
ಯಾವುದೇ ಬ್ಯಾಂಕ್ ತನ್ನ ಗ್ರಾಹಕನ ಠೇವಣಿ ಮೇಲೆ ವಿಮೆ (ಡೆಪಾಸಿಟ್ ಇನ್ಶುರೆನ್ಸ್) ಮಾಡಿಸಿರುತ್ತದೆ. ಆರ್‌ಬಿಐನ ಅಂಗಸಂಸ್ಥೆಯಾಗಿರುವ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್‌ಗೆ (ಡಿಐಸಿಜಿಸಿ) ನಿರ್ದಿಷ್ಟ ಕಂತು ಪಾವತಿಸುವ ಮೂಲಕ ಬ್ಯಾಂಕ್‌ಗಳು ಗ್ರಾಹಕರ ಠೇವಣಿಗೆ ಭದ್ರತೆ ಒದಗಿಸಿರುತ್ತವೆ. ಒಂದು ವೇಳೆ ಬ್ಯಾಂಕ್‌ಗಳು ದಿವಾಳಿಯಾದರೆ, ಸಂಕಷ್ಟಕ್ಕೆ ಸಿಲುಕಿದರೆ ಅಥವಾ ಠೇವಣಿದಾರರ ಹಣ ಮರಳಿಸಲು ವಿಫಲವಾದರೆ ಗ್ರಾಹಕರಿಗೆ ನಿರ್ದಿಷ್ಟಪಡಿಸಿದ ಠೇವಣಿ ಹಣವನ್ನು ಡಿಐಸಿಜಿಸಿ ಪಾವತಿಸುತ್ತದೆ.
Advertisement
ಏನಿದು ಡಿಐಸಿಜಿಸಿ?
ಡಿಐಸಿಜಿಸಿ ಆರ್‌ಬಿಐನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಇದು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸ್ಥಳೀಯ ಪ್ರದೇಶದ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಸೇರಿದಂತೆ ವಾಣಿಜ್ಯ ಬ್ಯಾಂಕ್‌ಗಳನ್ನು ಒಳಗೊಂಡಿರುವ ಠೇವಣಿ ವಿಮೆಯನ್ನು ನಿರ್ವಹಿಸುತ್ತದೆ. 2023-24ರಲ್ಲಿ ಡಿಐಸಿಜಿಸಿ 1,432 ಕೋಟಿ ಕ್ಲೇಮ್‌ಗಳನ್ನು ಇತ್ಯರ್ಥಪಡಿಸಿದೆ. ಕಳೆದ ವರ್ಷದ ಅಂತ್ಯಕ್ಕೆ 1,997 ವಿಮೆ ಮಾಡಲಾದ ಬ್ಯಾಂಕ್‌ಗಳು ಡಿಐಸಿಜಿಸಿಯಲ್ಲಿ ನೋಂದಣಿಯಾಗಿವೆ. ಅವುಗಳನ್ನು 140 ವಾಣಿಜ್ಯ ಬ್ಯಾಂಕ್‌ಗಳು ಮತ್ತು 1,875 ಸಹಕಾರಿ ಬ್ಯಾಂಕ್‌ಗಳಾಗಿವೆ.
ಭಾರತದಲ್ಲಿ ಪ್ರಾರಂಭವಾಗಿದ್ದು ಯಾವಾಗ?
ರೇವಣಿ ವಿಮೆ ಭಾರತದಲ್ಲಿ 1996ರ ಜ.1 ರಂದು ಪ್ರಾರಂಭವಾಯಿತು. ಆಗ ಠೇವಣಿ ವಿಮಾ ನಿಗಮ (ಡಿಐಸಿ) ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಅದನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಡಿಯಲ್ಲಿ ಸ್ಥಾಪಿಸಲಾಯಿತು.
ಠೇವಣಿ ವಿಮಾ ಮಿತಿ ಹಿಂದೆ ಎಷ್ಟಿತ್ತು?
1962, ಜನವರಿ 1: 1,500
1968, ಜನವರಿ 1: 5,000
1970, ಏಪ್ರಿಲ್ 1: 10,000
1976, ಜನವರಿ 1: 20,000
1980, ಜುಲೈ 1: 30,000
1993, ಮೇ 1 1,00,000
ಈಗ ಎಷ್ಟಿದೆ?
2020ರ ಫೆಬ್ರವರಿ 4 ರಂದು ಠೇವಣಿ ವಿಮಾ ಮಿತಿಯ ಮೊತ್ತವನ್ನು ಸರ್ಕಾರ 5 ಲಕ್ಷ ರೂ. ವರೆಗೆ ಹೆಚ್ಚಿಸಿತ್ತು. ಈ ಮಿತಿಯನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ವಿಮೆಯನ್ನು ಹೆಚ್ಚಿಸುವ ಪ್ರಸ್ತಾವವನ್ನು ಸರ್ಕಾರ ಪರಿಗಣಿಸುತ್ತಿದೆ. ಸರ್ಕಾರ ಅನುಮೋದನೆ ನೀಡಿದ ಬಳಿಕ ಅಧಿಸೂಚನೆ ಹೊರಡಿಸಲಾಗುವುದು ಎನ್ನಲಾಗಿದೆ. ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಹಗರಣ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.
ಏನಿದು ಬ್ಯಾಂಕ್ ಹಗರಣ?
ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ 122 ಕೋಟಿ ರೂ. ಹಗರಣ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಮತ್ತು ಮುಖ್ಯ ಅಕೌಂಟೆಂಟ್, ಆತನ ಸಹಚರನ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಬ್ಯಾಂಕ್‌ನ ಮಾಜಿ ಸಿಇಒ ಬಂಧನ ಕೂಡ ಆಗಿದೆ. ಬ್ಯಾಂಕಿನ ಜನರಲ್ ಮ್ಯಾನೇಜರ್ ಮತ್ತು ಮುಖ್ಯ ಅಕೌಂಟೆಂಟ್ ಹಿತೇಶ್ ಮೆಹ್ತಾ ಅವರು ತನ್ನ ಸಹಚರರೊಂದಿಗೆ ಸೇರಿ ಸಂಚು ರೂಪಿಸಿ ಪ್ರಭಾದೇವಿ ಮತ್ತು ಗೊರೆಗಾಂವ್ ಬ್ಯಾಂಕಿನ ಕಚೇರಿಗಳ ತಿಜೋರಿಯಲ್ಲಿದ್ದ ಹಣದಿಂದ 122 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಆರ್‌ಬಿಐ ಕೈಗೊಂಡ ಕ್ರಮಗಳೇನು?
ಮೇಲ್ವಿಚಾರಣಾ ವೈಫಲ್ಯ, ಕಳಪೆ ಆಡಳಿತ ಮಾನದಂಡಗಳನ್ನು ಉಲ್ಲೇಖಿಸಿ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯನ್ನು 12 ತಿಂಗಳ ಕಾಲ ಆರ್‌ಬಿಐ ರದ್ದುಗೊಳಿಸಿದೆ. ಜೊತೆಗೆ ಬ್ಯಾಂಕ್‌ಗೆ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಬ್ಯಾಂಕ್ ಹೊಸ ವ್ಯವಹಾರ ನಡೆಸುವುದು, ಹಣ ಹಿಂಡೆಯುವಕ್ಕೂ ಬ್ರೇಕ್ ಹಾಕಿದೆ. ಯಾವುದೇ ಸಾಲ ಮತ್ತು ಮುಂಗಡಗಳನ್ನು ಮಂಜೂರು ಮಾಡದಂತೆ ನಿರ್ದೇಶನ ನೀಡಿದೆ. ಫೆಬ್ರವರಿ 13ರಂದು ಬ್ಯಾಂಕ್ ವ್ಯವಹಾರ ಮುಗಿದ ನಂತರ ಈ ನಿರ್ಬಂಧಗಳು ಜಾರಿಗೆ ಬಂದಿವೆ.
ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಮುಂಬೈ, ಥಾಣೆ, ನವಿ ಮುಂಬೈ ಮತ್ತು ಪುಣೆ ಹಾಗೂ ಗುಜರಾತ್‌ನ ಸೂರತ್‌ನಲ್ಲಿ 30 ಶಾಖೆಗಳನ್ನು ಹೊಂದಿದೆ. 2024ರ ಮಾರ್ಚ್ ಅಂತ್ಯದ ವೇಳೆಗೆ ಬ್ಯಾಂಕ್ 2,436 ಕೋಟಿ ರೂ. ಠೇವಣಿ ಮೂಲವನ್ನು ಹೊಂದಿತ್ತು. 2023-24ರಲ್ಲಿ 22.78 ಕೋಟಿ ರೂ. ಮತ್ತು 2022-34ರಲ್ಲಿ 30.74 ಕೋಟಿ ರೂ. ನಷ್ಟವನ್ನು ಬ್ಯಾಂಗಳು ದಾಖಲಿಸಿವೆ.
ಠೇವಣಿ ವಿಮಾ ಮಿತಿ ಹೆಚ್ಚಳಕ್ಕೆ ಕಾರಣವೇನು?
ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ.ರಾಜೇಶ್ವರ್ ರಾವ್ ಅವರು, ಕಳೆದ ವರ್ಷದ ಮಾ.31ರ ಅಂಕಿಅಂಶದಂತೆ ಸಂಪೂರ್ಣ ಸಂರಕ್ಷಿತ ಖಾತೆಗಳು 97.8% ರಷ್ಟಿವೆ. ಇದು ಅಂತಾರಾಷ್ಟ್ರೀಯ ಮಾನದಂಡದ 80% ಗಿಂತ ಹೆಚ್ಚಿದೆ. ಬ್ಯಾಂಕ್ ಠೇವಣಿಗಳ ಮೌಲ್ಯದಲ್ಲಿನ ಬೆಳವಣಿಗೆ, ಆರ್ಥಿಕ ಬೆಳವಣಿಗೆ ದರ, ಹಣದುಬ್ಬರ, ಆದಾಯ ಮಟ್ಟಗಳಲ್ಲಿನ ಹೆಚ್ಚಳ ಮೊದಲಾದ ಅಂಶಗಳನ್ನು ಪರಿಗಣಿಸಿ ಈ ಮಿತಿಯನ್ನು ನಿಯತಕಾಲಿಕವಾಗಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ.
ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್‌ನಂತಹ ವೈಫಲ್ಯಗಳು ಠೇವಣಿದಾರರ ಹಿತಾಸಕ್ತಿಗೆ ಮಾರಕವಾಗಿವೆ. ಇದರಿಂದ ಗ್ರಾಹಕರಲ್ಲಿ ವಿಶ್ವಾಸ ಕುಂದಬಹುದು. ಹೆಚ್ಚಿನ ಠೇವಣಿ ಮೊತ್ತ ಇಡಲು ಹಿಂಜರಿಯಬಹುದು. ಠೇವಣಿ ವಿಮಾ ಮಿತಿ ಹೆಚ್ಚಿಸುವುದರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರ ನಂಬಿಕೆ ಮತ್ತು ವಿಶ್ವಾಸವನ್ನು ಹೆಚ್ಚಿಸಬಹುದು. ಆ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.