ಡೆಂಗ್ಯೂ ಜ್ವರ ಈ ಹೆಸರು ಕೇಳಿದ ತಕ್ಷಣವೇ ಎಲ್ಲರೂ ಬೆಚ್ಚಿಬೀಳುತ್ತಿದ್ದಾರೆ. ಈ ಜ್ವರವನ್ನು ಚಿಕಿತ್ಸೆಗಿಂತ ಆರೈಕೆಯಲ್ಲೇ ಓಡಿಸಬೇಕು. ಈ ಜ್ವರ ಹೆಚ್ಚಾಗಿ ಚಿಕ್ಕ ಮಕ್ಕಳು, ವಯೋವೃದ್ಧರನ್ನು ಬಾಧಿಸುತ್ತದೆ. ಯಾಕೆಂದರೆ ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಪಕ್ವಾವಾಗಿರುವುದಿಲ್ಲ. ವಯೋವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತಿರುತ್ತದೆ.
ಈ ಜ್ವರಕ್ಕೆ ಕಾರಣ ಈಡಿಸ್ ಈಜಿಪ್ತಿ (Aedes aegypti) ಎಂಬ ಹೆಸರಿನ ಭಯಾನಕ ಹೆಣ್ಣು ಸೊಳ್ಳೆ. ಇದು ಯಾವುದೇ ವಾತಾವರಣದಲ್ಲಿ ಬದುಕಬಲ್ಲದು. ಈ ಸೊಳ್ಳೆಗಳಿಗೆ ಸಂತಾನೋತ್ಪತ್ತಿ ವೇಳೆ ಅಗತ್ಯವಿರುವ ರಕ್ತಕ್ಕಾಗಿ ಮನುಷ್ಯರನ್ನು ಕಚ್ಚಿ ರಕ್ತವನ್ನು ಹೀರುತ್ತವೆ. ಈ ಸೊಳ್ಳೆಗಳು ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಮೊಣ ಕೈ, ಮೊಣಕಾಲಿನ ಭಾಗದಲ್ಲಿ ಕಚ್ಚುತ್ತವೆ. ನೀವು ಇವನ್ನು ನೋಡಿ ಹೊಡೆಯುವಷ್ಟರಲ್ಲಿ ರಕ್ತ ಹೀರಿ ಓಡುತ್ತವೆ. ಆದ್ದರಿಂದ ಈ ಜ್ವರಕ್ಕೆ ಇಂತದ್ದೇ ಎಂಬ ಔಷಧಿ ಎಲ್ಲೂ ಇಲ್ಲ.
Advertisement
Advertisement
ರಕ್ತದಲ್ಲಿನ ಪ್ಲೇಟ್ ಲೆಟ್ಸ್ ಗಳನ್ನು ಹೆಚ್ಚಿಸಿಕೊಳ್ಳುವ ಹೊರತು ಯಾವುದೇ ಚಿಕಿತ್ಸೆ ಇಲ್ಲ. ವೈರಸ್ ನಿಮ್ಮ ದೇಹ ಹೊಕ್ಕ ತಕ್ಷಣವೇ ನಿಮಗೆ ತಿಳಿಯದಂತೆ ರಕ್ತಕಣಗಳು ಕುಗ್ಗುತ್ತಾ ಹೋಗುತ್ತದೆ. ಆದರೆ ಸೂಕ್ತ ಎಚ್ಚರಿಕೆ ವಹಿಸುವುದರ ಜೊತೆ ತಕ್ಷಣಕ್ಕೆ ಚಿಕಿತ್ಸೆ ಪಡೆದರೆ ಭಯ ಪಡುವ ಅಗತ್ಯವಿಲ್ಲ. ಮುಖ್ಯವಾಗಿ ಇದು ಅಂಟುಜ್ವರ ಅಲ್ಲ ಅಂದರೆ ಜ್ವರ ಪೀಡಿತರಿಂದ ಇನ್ನೊಬ್ಬರಿಗೆ ನೇರವಾಗಿ ಹರಡುವುದಿಲ್ಲ. ಜ್ವರಪೀಡಿತರನ್ನು ಕಚ್ಚಿದ ಸೊಳ್ಳೆ ಇನ್ನೊಬ್ಬರಿಗೆ ಕಚ್ಚಿದಾಗ ಮಾತ್ರ ಹರಡುತ್ತದೆ.
Advertisement
ಡೆಂಗ್ಯೂ ಜ್ವರದ ಲಕ್ಷಣಗಳು:
* ಅಧಿಕ ಜ್ವರ, ತಲೆನೋವು, ಸುಸ್ತು ಕಾಣಿಸಿಕೊಳ್ಳುತ್ತವೆ.
* ಮಾಂಸಖಂಡಗಳಲ್ಲಿ, ಕೈ, ಕಾಲುಗಳ ಕೀಲುಗಳಲ್ಲಿ ನೋವು ಉಂಟಾಗುತ್ತದೆ.
* ಕಣ್ಣಿನಲ್ಲಿ ಹೇಳಲಾಗದ ನೋವು, ಉರಿಯಾಗುತ್ತದೆ.
* ಕೆಮ್ಮು, ಗಂಟಲು ಕೆರೆತ ಬರುತ್ತದೆ.
* ಕೆಲವರಿಗೆ ವಾಂತಿ, ತಲೆ ಸುತ್ತು ಕಾಣಿಸಿಕೊಳ್ಳುತ್ತವೆ.
Advertisement
ಡೆಂಗ್ಯೂ ಜ್ವರಕ್ಕೆ ಮನೆ ಮದ್ದು: ಈ ಜ್ವರ ಇರುವ ಬಗ್ಗೆ ಗೊತ್ತಾದ ಮೇಲೆ ಸಾಮಾನ್ಯವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಔಷಧಿ ಪಡೆದು ವಿಶ್ರಾಂತಿಗೆ ಸೂಚಿಸಲಾಗುತ್ತದೆ. ಜೊತೆಗೆ ಸಾಕಷ್ಟು ನೀರು ಮತ್ತು ದ್ರವ ಆಹಾರಗಳನ್ನು ಸೇವಿಸಬೇಕಾಗುತ್ತದೆ. ವಿಟಮಿನ್ ಸಿ, ಸಿಟ್ರಸ್ ಅಂಶ ಇರುವ, ನೀರಿನಾಂಶ ಜಾಸ್ತಿ ಇರುವ ಹಣ್ಣುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಆದರೆ ಎಣ್ಣೆ, ಮಸಾಲೆಯುಕ್ತ ಆಹಾರವನ್ನು ವರ್ಜಿಸಿದರೆ ಉತ್ತಮ.
ಯಾವ ಆಹಾರಗಳನ್ನು ಸೇವಿಸಬೇಕು:
* ಕಿತ್ತಳೆ ಹಣ್ಣು ಸೇವನೆಯಿಂದ ಡೆಂಗ್ಯೂ ಬೇಗ ಗುಣವಾಗುತ್ತದೆ. ವಿವಿಧ ವಿಟಮಿನ್ ಮತ್ತು ಖನಿಜಾಂಶ ಭರಿತ ಪೌಷ್ಟಿಕ ಹಣ್ಣು, ಅಧಿಕ ನಾರಿನಂಶ, ವಿಟಮಿನ್ ಸಿ ಇರುವ ಮೂಸಂಬಿ, ನಿಂಬೆ ರಸ, ಅನಾನಸ್, ಕಿವಿ ಫ್ರೂಟ್, ದ್ರಾಕ್ಷಿ, ಚಕ್ಕೋತ ಹಣ್ಣುಗಳ ರಸ, ಹಣ್ಣು ಸೇವನೆಯಿಂದ ಅವಶ್ಯ ಪೋಷಕಾಂಶ ದೊರೆಯುತ್ತದೆ.
* ಎಳನೀರು ಸೇವನೆಯಿಂದ ದೇಹದಲ್ಲಿ ಡೆಂಗ್ಯೂನಿಂದ ಕಡಿಮೆ ಆಗಿದ್ದ ನೀರಿನಾಂಶ ಹೆಚ್ಚಳವಾಗುತ್ತದೆ. ದಿನಕ್ಕೆ 2-3 ಎಳನೀರು ಕುಡಿಯಿರಿ.
* ದಾಳಿಂಬೆ ಹಣ್ಣಿನ ಬೀಜಗಳು ಕಬ್ಬಿಣಾಂಶದ ಪ್ರಮುಖ ಮೂಲವಾಗಿವೆ. ದಾಳಿಂಬೆ ರಸ, ಹಣ್ಣು ಸೇವನೆಯಿಂದ ರಕ್ತಕಣಗಳನ್ನು ನಿಯಂತ್ರಣದಲ್ಲಿಡಬಹುದು. ಆಯಾಸವನ್ನೂ ಕಡಿಮೆಗೊಳಿಸುತ್ತದೆ.
* ಡೆಂಗ್ಯೂದಿಂದ ಬಳಲುತ್ತಿರುವವರಿಗೆ ಪಪ್ಪಾಯ ಎಲೆ ಮತ್ತು ಬೀಜಗಳ ರಸವೂ ಅತ್ಯುತ್ತಮ ಔಷಧಿ. ಪಪ್ಪಾಯ ಎಲೆಯ ರಸ, ಪಪ್ಪಾಯ ಹಣ್ಣಿನ ಜ್ಯೂಸ್ ಸೇವನೆ ಉತ್ತಮ.
* ಮೊಳಕೆ ಕಾಳುಗಳ ಸೇವನೆ ಉತ್ತಮ.
* ಗಂಟೆಗೊಂದು ಲೋಟ ನೀರು ಕುಡಿಯುವುದು.
* ಡೆಂಗ್ಯೂ ಜ್ವರ ಕಡಿಮೆ ಮಾಡಲು ಹರ್ಬಲ್ ಟೀ ಕುಡಿಯುವುದು ಒಳ್ಳೆಯದು.
* ತರಕಾರಿ ಜ್ಯೂಸ್, ಸೂಪ್ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ.
ಮುಂಜಾಗ್ರತಾ ಕ್ರಮಗಳೇನು?:
* ಡೆಂಗ್ಯೂ ಹರಡುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ನೀವು ಎಚ್ಚರಗೊಳ್ಳಬೇಕು. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸಬೇಕು.
* ಸೊಳ್ಳೆಗಳಿಗೆ ಸೂಕ್ತವಾದ ತಾಣಗಳನ್ನು ನಾಶಪಡಿಸುವುದು.
* ಮನೆಯ ಸುತ್ತಮುತ್ತ ನಿಂತಿರುವ ನೀರಿನ ನೆಲೆಗಳನ್ನು ನಾಶ ಪಡಿಸಬೇಕು.
* ತೆಂಗಿನ ಚಿಪ್ಪು, ಟಯರ್‍ಗಳು, ಚಿಕ್ಕ ಗುಂಡಿಗಳು, ಬೇಡ ಎಂದು ಬಿಸಾಡಿದ ಪ್ಲಾಸ್ಟಿಕ್ ಬಕೆಟ್, ಜಗ್ ಇತ್ಯಾದಿಗಳ ಸಂಗ್ರಹ ಬೇಡ.
* ನೀರು ನಿಂತಿರುವ ಕಡೆ ಸೂಕ್ತ ಕೀಟನಾಶಕ ಸಿಂಪಡಿಸಿ.
* ಮಕ್ಕಳಿಗೆ ಉದ್ದ ತೋಳಿನ ಬಟ್ಟೆ, ಸಾಕ್ಸ್ ಹಾಕಿರಿ.
* ಸೊಳ್ಳೆಗಳು ಮೊಟ್ಟೆಗಳನ್ನು ಇಡಲು ಅವಕಾಶ ಇರುವ ಕುಂಡಗಳು, ಮತ್ತಿತರ ವಸ್ತುಗಳನ್ನು ಸ್ವಚ್ಛ ಮಾಡಿರಿ.
ಒಟ್ಟಿನಲ್ಲಿ ಡೆಂಗ್ಯೂ ಜ್ವರ ಬಂತೆಂದರೆ ಭಯ ಪಡುವುದು ಬೇಡ. ದಿನ ನಿತ್ಯದ ಆಹಾರ ಕ್ರಮ, ನಾಲಿಗೆ ರುಚಿಯನ್ನು ನಿಯಂತ್ರಣದಲ್ಲಿಡುವುದರಿಂದ ಡೆಂಗ್ಯೂವನ್ನು ಹೊಡೆದೋಡಿಸಬಹುದು. ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರ ಭೇಟಿ ಮಾಡಿ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳಿ. ಸಾಕಷ್ಟು ಮನೆ ಮದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಸಲಹೆಗಳನ್ನೂ ಪಾಲಿಸಿದರೆ ನೀವು ಡೆಂಗ್ಯೂ ಜ್ವರದಿಂದ ಪಾರಾಗಬಹುದು.