ಕ್ಯಾಲಿಫೋರ್ನಿಯಾ: ನೋಟ್ ಬ್ಯಾನ್ ಆದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಶನಿವಾರ ಬರ್ಕೇಲಿಯಾದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿ, ಸ್ವಚ್ಛ ಭಾರತ್, ಜಿಎಸ್‍ಟಿ ಮತ್ತು ನೋಟ್‍ಬ್ಯಾನ್ ಅಂತಹ ಕ್ರಮಗಳಿಂದ ದೇಶದಲ್ಲಿ ಯಾವುದೇ ಪರಿವರ್ತನೆ ಆಗಿಲ್ಲ ಎನ್ನುವ ಮಾತನ್ನು ನಾನು ನಿರಾಕರಿಸುತ್ತೇನೆ ಎಂದರು.
ಭಯೋತ್ಪಾದಕರು ನೀಡುತ್ತಿದ್ದ ಹಣಕ್ಕಾಗಿ ಬಂಡಾಯಕಾರರು ಕಲ್ಲು ಎಸೆದಾಡುವಂತಹ ಚಟುವಟಿಕೆಗಳು ಕಳೆದ 7-8 ತಿಂಗಳಿನಿಂದ ಬಹಳಷ್ಟು ಕಡಿಮೆಯಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದರು.
ನೋಟ್ ಬ್ಯಾನ್ ಆದ ಬಳಿಕ ಜಮ್ಮು ಮತ್ತು ಕಾಶ್ಮೀರ ಹಾಗೂ ಛತ್ತೀಸ್‍ಗಢ ದಂತಹ ರಾಜ್ಯಗಳಲ್ಲಿ ಬಂಡಾಯಗಾರರು ಮತ್ತು ಭಯೋತ್ಪಾದಕ ಚಟುವಟಿಕೆಗಳು ಕಳೆದ 7-8 ತಿಂಗಳಿಂದ ಏಕೆ ಹೆಚ್ಚು ಸಂಭವಿಸುತಿಲ್ಲ ಎಂದು ಇದೇ ವೇಳೆ ಸಂದರ್ಭದಲ್ಲಿ ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನವೆಂಬರ್ 8 ರಂದು 1000 ಮತ್ತು 500 ಮುಖ ಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ್ದರು. ದೇಶದಲ್ಲಿ ಕಪ್ಪು ಹಣ, ನಕಲಿ ನೋಟು, ಭಯೋತ್ಪಾದನೆ ಹಣ ಹಾಗೂ ಭ್ರಷ್ಟಾಚಾರ ಇವುಗಳೆಲ್ಲವನ್ನು ನಿಯಂತ್ರಿಸುವ ಸಲುವಾಗಿ ನೋಟ್ ಬ್ಯಾನ್ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾಷಣದಲ್ಲಿ ತಿಳಿಸಿದ್ದರು.