ನೋಟು ನಿಷೇಧವಾಗಿ ವರ್ಷವಾದ್ರೂ ಇನ್ನೂ ಮುಗಿದಿಲ್ಲ ಹಳೇ ನೋಟು ಪರಿಶೀಲನಾ ಕಾರ್ಯ

Public TV
2 Min Read
500 and 1000 rupee notes

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಮಾಡಿ ಒಂದು ವರ್ಷವಾಗುತ್ತಾ ಬಂದರೂ, ಆರ್‍ಬಿಐ ಹಳೇ ನೋಟುಗಳ ಪರಿಶೀಲನಾ ಕಾರ್ಯ ಇನ್ನೂ ಮುಕ್ತಾಯಗೊಂಡಿಲ್ಲ ಎಂದು ಹೇಳಿದೆ.

ಹಳೇ ನೋಟುಗಳನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರ್‍ಬಿಐ ತಿಳಿಸಿದೆ.

note ban 1

ನೋಟು ನಿಷೇಧವಾದ ನಂತರ ಹಳೇ ನೋಟುಗಳ ಎಣಿಕೆಯ ಕುರಿತು ಸುದ್ದಿ ಸಂಸ್ಥೆಯ ವರದಿಗಾರರೊಬ್ಬರು ಸಲ್ಲಿಸಿದ್ದ ಆರ್‍ಟಿಐ ಅರ್ಜಿಗೆ ಉತ್ತರಿಸಿರುವ ಆರ್‍ಬಿಐ, ಸೆಪ್ಟೆಂಬರ್ 30ರ ವೇಳೆಗೆ 500 ರೂ. ಮುಖಬೆಲೆಯ 1,134 ಕೋಟಿ ನೋಟುಗಳು ಹಾಗೂ 1 ಸಾವಿರ ರೂ. ಮುಖಬೆಲೆಯ 524.90 ಕೋಟಿ ನೋಟುಗಳ ಎಣಿಕೆ ಮುಗಿದಿದೆ. ಇವುಗಳ ಮೌಲ್ಯ ಕ್ರಮವಾಗಿ 5.67 ಲಕ್ಷ ಕೋಟಿ ರೂ. ಮತ್ತು 5.24 ಲಕ್ಷ ಕೋಟಿ ರೂ. ಎಂದು ತಿಳಿಸಿದೆ.

ಈ ಕಾರ್ಯವನ್ನು ನಡೆಸಲು ಬ್ಯಾಂಕ್ ಸಿಬ್ಬಂದಿ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 66 ಆತ್ಯಾಧುನಿಕ ಯಂತ್ರಗಳ ಮೂಲಕ ಪರಿಶೀಲನಾ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಪರಿಶೀಲನಾ ಕಾರ್ಯ ಯಾವಾಗ ಮುಕ್ತಾಯವಾಗುತ್ತದೆ ಎಂಬ ಪ್ರಶ್ನೆಗೆ, ಪರಿಶೀಲನೆ ಮುಂದುವರೆದಿದೆ ಎಂದು ಮಾತ್ರ ಉತ್ತರಿಸಿದೆ.

RBI Logo

ಕಳೆದ ವರ್ಷ ನವೆಂಬರ್ 8ರಂದು ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿತ್ತು. ವಿವಿಧ ಬ್ಯಾಂಕ್‍ಗಳ ಮೂಲಕ ಹಿಂಪಡೆದಿದ್ದ ಹಳೇ ನೋಟುಗಳ ಪರಿಶೀಲನಾ ಕಾರ್ಯವನ್ನು ಆರ್‍ಬಿಐ ನಡೆಸುತ್ತಿದೆ.

ದೇಶದಲ್ಲಿ ನೋಟು ನಿಷೇಧವಾದ ವಾರ್ಷಿಕೋತ್ಸವದ ಪ್ರಯುಕ್ತ ನವೆಂಬರ್ 8 ರಂದು ಕಪ್ಪು ದಿನವಾಗಿ ಆಚರಿಸಲು ಮಮತ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ, ಕಾಂಗ್ರೆಸ್ ಹಾಗೂ ಹಲವು ರಾಜಕೀಯ ಪಕ್ಷಗಳು ನಿರ್ಧಾರ ಕೈಗೊಂಡಿವೆ. ವಿಪಕ್ಷಗಳ ಪ್ರತಿಭಟನೆಗೆ ಪ್ರತಿಯಾಗಿ ಆಡಳಿತ ಪಕ್ಷ ಬಿಜೆಪಿ ನವೆಂಬರ್ 8 ರಂದು ‘ಕಪ್ಪು ಹಣ ವಿರೋಧಿ ದಿನ’ವನ್ನಾಗಿ ಆಚರಿಸಲು ತೀರ್ಮಾನಿಸಿದೆ.

ಆರ್‍ಬಿಐ ಅಗಸ್ಟ್ 30 ರಂದು ಸಲ್ಲಿಸಿರುವ 2016-17 ವಾರ್ಷಿಕ ವರದಿಯ ಪ್ರಕಾರ ಶೇ.99 ರಷ್ಟು ಆಂದರೆ, 15.28 ಲಕ್ಷ ಕೋಟಿ ಹಣವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿತ್ತು.

black and white old notes 7 copy

ನೋಟು ನಿಷೇಧಕ್ಕೂ ಮುನ್ನ ಭಾರತದಲ್ಲಿ 500 ರೂ. ಮುಖಬೆಲೆಯ 1,716.5 ಕೋಟಿ ನೋಟುಗಳು ಹಾಗೂ ಒಂದು ಸಾವಿರ ಮುಖಬೆಲೆಯ 685.8 ಕೋಟಿ ನೋಟುಗಳು ಚಲಾವಣೆಯಲ್ಲಿದ್ದವು ಎಂದು ಆರ್‍ಬಿಐ ಮಾಹಿತಿ ನೀಡಿತ್ತು.

ಪ್ರಸ್ತುತ ಆರ್‍ಬಿಐ ಹೊಸ 500 ರೂ. ಹಾಗೂ 2000 ರೂ. ಮುಖಬೆಲೆಯ ನೋಟುಗಳನ್ನು ಮುದ್ರಣಾ ಮಾಡಲು 7,965 ಕೋಟಿ ರೂ. ವೆಚ್ಚ ಮಾಡಿದೆ. ಕಳೆದ ವರ್ಷ ಹೊಸ ನೋಟು ಮುದ್ರಣಕ್ಕೆ 3,421 ಕೋಟಿ ರೂ. ಹಣವನ್ನು ಆರ್‍ಬಿಐ ವೆಚ್ಚ ಮಾಡಿತ್ತು.

500 rupees 1000 rupees

note ban 2

Share This Article
Leave a Comment

Leave a Reply

Your email address will not be published. Required fields are marked *