ಮಂಡ್ಯ/ಬೆಂಗಳೂರು: ಮೇಲುಕೋಟೆ ಚೆಲುವನಾರಾಯಣನಿಗೆ ದೀವಟಿಗೆ ಸಲಾಂ ಆರತಿ ಕೂಡ ವಿವಾದದ ವಸ್ತುವಾಗಿ ಮಾರ್ಪಟ್ಟಿದೆ. ಸಲಾಂ ಆರತಿ ಎಂದು ಕರೆಯುವ ಬದಲು ಸಂಧ್ಯಾರತಿ ಎಂದು ಕರೆಯುವಂತೆ ಮಂಡ್ಯ ಜಿಲ್ಲಾ ಧಾರ್ಮಿಕ ಪರಿಷತ್ ಒತ್ತಾಯಿಸಿದೆ.
ಈ ಬೆನ್ನಲ್ಲೇ, ದೀವಟಿಗೆ ಸಲಾಂ ವಿಚಾರವಾಗಿ ದೇವಾಲಯದ ಆಡಳಿತ ಮಂಡಳಿಯಿಂದ ಜಿಲ್ಲಾಡಳಿತ ವರದಿ ಕೇಳಿದೆ. ಜಿಲ್ಲಾ ಧಾರ್ಮಿಕ ಪರಿಷತ್ ಮನವಿಯನ್ನು ಪರಿಶೀಲಿಸಿ ಸ್ಪಷ್ಟವಾದ ಅಭಿಪ್ರಾಯ ತಿಳಿಸುವಂತೆ ಸೂಚನೆ ನೀಡಿದೆ. ಈ ಸಂಬಂಧ ಸಭೆ ನಡೆಸಿದ ದೇಗುಲದ ಸ್ಥಾನಿಕರು, ಸಂಜೆ ವೇಳೆ ನಡೆಯುತ್ತಿದ್ದ ದೀವಟಿಗೆ ಸಲಾಂ ಆರತಿ ಕೈಬಿಟ್ಟು, ಅದರ ಬದಲುಸಂಧ್ಯಾರತಿ ಎಂದು ಹೆಸರಿಡಬಹುದು ಎಂದು ಲಿಖಿತ ರೂಪದಲ್ಲಿ ವರದಿ ನೀಡಿದ್ದಾರೆ. ನಮ್ಮ ಅಭಿಪ್ರಾಯವನ್ನು ಸರ್ಕಾರ ಪರಿಗಣಿಸುವ ವಿಶ್ವಾಸವಿದೆ ಎಂದು ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇಗುಲದ ಸ್ಥಾನಿಕರಾದ ಶ್ರೀನಿವಾಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಲಾಲ್ ಆಯ್ತು ಈಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ
ಇತ್ತ ಬೆಂಗಳೂರಿನಲ್ಲಿ ವಿಶ್ವಪ್ರಸಿದ್ಧ ಬೆಂಗಳೂರು ಕರಗ ಉತ್ಸವ ಮೂರ್ತಿಯನ್ನು ದರ್ಗಾಗೆ ಕೊಂಡೊಯ್ಯುವುದನ್ನು ಕೆಲ ಹಿಂದೂ ಸಂಘಟನೆಗಳು ವಿರೋಧ ಮಾಡಿವೆ. ಆದ್ರೇ, ಇದಕ್ಕೆ ಕರಗ ಉತ್ಸವ ಸಮಿತಿ ಡೋಂಟ್ ಕೇರ್ ಎಂದಿದೆ. ನಾವು ನಮ್ಮ ಸಂಪ್ರದಾಯವನ್ನು ಮುಂದುವರೆಸುತ್ತೇವೆ. ಇದುವರೆಗೂ ಯಾರು ಬಂದು ನಮ್ಮನ್ನು ಭೇಟಿ ಮಾಡಿಲ್ಲ. ಈಗಾಗಲೇ ಮೌಲ್ವಿಗಳು ಬಂದು ಆಹ್ವಾನ ನೀಡಿ ಹೋಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮಸ್ತಾನ್ ಸಾಬ್ ದರ್ಗಾಗೆ ಕರಗ ಉತ್ಸವ ಮೂರ್ತಿ ತೆರಳಲಿದೆ. ಇದು ಸಾಮರಸ್ಯದ ಸಂಕೇತ ಎಂದು ಕರಗ ಉತ್ಸವ ಸಮಿತಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಂಜಾನ್ ತಿಂಗಳಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಆಂಧ್ರ ಸರ್ಕಾರದಿಂದ ವಿಶೇಷ ಆದ್ಯತೆ