ಬೆಂಗಳೂರು: ಎಸ್ಐಆರ್ ಸಂಬಂಧ ಬಿಜೆಪಿ ಕಾರ್ಯಕರ್ತರ (BJP Workers) ಮೇಲೆ ಪೊಲೀಸ್ ಇಲಾಖೆ ಕಾನೂನು ಕ್ರಮ ಜಾರಿಗೊಳಿಸುವುದು, ಕಿರುಕುಳ ನೀಡಿದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ಎಚ್ಚರಿಕೆ ನೀಡಿದರು.
ಎಸ್ಐಆರ್ (SIR) ಸಂದರ್ಭದಲ್ಲಿ ಸಲ್ಲಿಸಲಾದ ನಮೂನೆ 7 ಅರ್ಜಿಗಳಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕ್ರಿಯೆಗಳನ್ನ ಕಾನೂನು ಅನುಸಾರ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರಿಗೆ ಮನವಿ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರ ಮೇಲೆ ಕಾನೂನು ಕ್ರಮವಾಗಬಾರದು. ಅವರನ್ನು ಬಂಧಿಸುವುದು, ಅವರಿಗೆ ಕಿರುಕುಳ, ಹಲ್ಲೆ ನಡೆಯಬಾರದು. ಇದು ಏನಾದರೂ ಮುಂದುವರಿದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳುವುದು ಪೊಲೀಸ್ ಜವಾಬ್ದಾರಿ. ಒಂದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಯಾವ ರೀತಿ ನಡೆದುಕೊಳ್ಳಬೇಕು ಹಾಗೆ ನಡೆದುಕೊಳ್ಳುತ್ತಿದೆ. ನಮಗೂ ಜವಾಬ್ದಾರಿ ಇದೆ. ನಮ್ಮ ಕಾರ್ಯಕರ್ತರ ಮೇಲಿನ ಎಲ್ಲಾ ಕ್ರಮಗಳು ಈ ತಕ್ಷಣದಿಂದಲೇ ನಿಲ್ಲಬೇಕು ಎಂದು ಹೇಳಿದರು.
ಚುನಾವಣಾ ಆಯೋಗದ ಕಚೇರಿಗೆ ಬಂದು ಧರಣಿ ನಡೆಸಿದ ಮುಖ್ಯಮಂತ್ರಿಗಳಿಗೆ ನಾಚಿಕೆ ಆಗಬೇಕು. ಅವರೇ ಬಂದು ಆಯುಕ್ತರಿಗೆ ಆಗ್ರಹಿಸುವುದು, ಒತ್ತಡ ಹೇರುವುದು ನಾಚಿಕೆಗೇಡಿನ ಕೆಲಸ. ನಾವು ಈಗಾಗಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇವೆ. ನಮ್ಮ ಮನವಿ ಸರಿ ಇದ್ದರೆ ಕ್ರಮ ಕೈಗೊಳ್ಳಲಿ. ರಾಜ್ಯದ ಮುಖ್ಯಮಂತ್ರಿಗಳ ಮಾತು ಕೇಳಿ ಕಾರ್ಯಕರ್ತರಿಗೆ ಕಿರುಕುಳ ನೀಡಬಾರದು. ಪೊಲೀಸ್ ಅಧಿಕಾರಿಗಳು ಸರ್ಕಾರವನ್ನು ಮೆಚ್ಚಿಸಲು ಕೆಲಸ ಮಾಡುವ ಬದಲು ಕಾನೂನು ಪ್ರಕಾರ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

