ಬೆಳಗಾವಿ: ಜಗವ ಬದುಕಲು ನಮ್ಮ ಆದಿ ಬಸವಾದಿ ಶರಣರು ವಚನ ಸಾಹಿತ್ಯ ನೀಡಿದರು. ಆದ್ರೆ ಜಾತಿ ವಾದಿಗಳಿಂದ ಅದಕ್ಕೆ ಆಪತ್ತು ಬಂದು ಎರಗಿತು ಎಂದು ಬಸವಧರ್ಮ ಪೀಠಾಧ್ಯಕ್ಷೆ ಡಾ. ಮಾತೆ ಮಹಾದೇವಿ ಹೇಳಿದ್ದಾರೆ.
ಲಿಂಗಾಯತ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ವೀರಶೈವರು ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಉಪಚಾರ ಮಾಡಿಕೊಂಡಿದ್ದಾರೆ. ನೀವು ಟಿಕೆಟ್ ಪಡೆದುಕೊಳ್ಳುವಾಗ ಲಿಂಗಾಯತ ಕೋಟಾ ಅಡಿ ಟಿಕೆಟ್ ಪಡೆದುಕೊಳ್ಳುತ್ತೀರಿ. ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕು. ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಒಳ್ಳೆಯ ಸ್ಥಾನದಲ್ಲಿದ್ದಾರೆ. ಅದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಹೇಳಿ ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನ ಕೊಡಿಸಲು ಒತ್ತಾಯ ಮಾಡಬೇಕು ಎಂದು ಅವರು ಆಗ್ರಹಿಸಿದರು.
Advertisement
ಮುಂದಿನ ದಿನಗಳಲ್ಲಿ ಸರ್ಕಾರಿ ಜಾತಿ ಪ್ರಮಾಣ ಪತ್ರದಲ್ಲಿ ವೀರಶೈವ ಲಿಂಗಾಯತ ಎಂದು ನಮೂದು ಮಾಡಲಾಗುತ್ತಿದೆ. ಅದನ್ನ ತೆಗೆದು ಹಾಕಲು ಮುಂದಿನ ದಿನಗಳಲ್ಲಿ ಅದರ ವಿರುದ್ಧ ಹೋರಾಟ ಮಾಡಲಾಗುತ್ತದೆ. ಮುಂದಿನ ಲಿಂಗಾಯತ ಸಮಾವೇಶ ಸೆಪ್ಟೆಂಬರ್ 10ರಂದು ಕಲಬುರಗಿಯಲ್ಲಿ ನಡೆದರೆ, ಅಕ್ಟೋಬರ್ 22 ರಂದು ಮೈಸೂರಲ್ಲಿ ನಡೆಯಲಿದೆ ಎಂದರು.
Advertisement
ಈ ವೇಳೆ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಯಾವುದನ್ನು ತಲೆಕೆಡಿಸಿಕೊಳ್ಳುವುದು ಬೇಡ. ಲಿಂಗಾಯತ ಧರ್ಮ ಸ್ವತಂತ್ರವಾಗಿದೆ. ಲಿಂಗಾಯತರು ಮತ್ತು ವೀರಶೈವ ಲಿಂಗಾಯತರು ಒಂದೇ ಅಲ್ಲ. ಮಾತೆ ಮಹಾದೇವಿ ಮತ್ತು ತೋಂಟದಾರ್ಯ ಶ್ರೀಗಳು ಈ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ರಾಜ್ಯ ಸರ್ಕಾರ ಮೊದಲು ಲಿಂಗಾಯತ ಧರ್ಮ ಸ್ವತಂತ್ರವೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಇಲ್ಲವಾದರೇ ರಾಜ್ಯ ಸರ್ಕಾರಕ್ಕೆ ಲಿಂಗಾಯತರು ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
Advertisement
ನಮ್ಮ ವಿಚಾರಗಳಲ್ಲಿ ತಲೆ ತೋರಿಸುವ ಕೆಲಸ ಮಾಡದಂತೆ ಲಿಂಗಾಯತ ಧರ್ಮಕ್ಕೆ ವಿರೋಧಿಸುವವರಿಗೆ ಎಚ್ಚರಿಕೆ. ಒಡೆದಾಳುವ ನೀತಿ ಇಲ್ಲೇ ನಿಲ್ಲಬೇಕು. ಹರಿಬ್ರಹ್ಮ ಬಂದರೂ ಲಿಂಗಾಯತ ಧರ್ಮ ಸ್ವತಂತ್ರ ಎಂದು ಘೋಷಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.