ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸತತ 4ನೇ ದಿನ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ. CPCB ಮಾಹಿತಿ ಪ್ರಕಾರ ಸೋಮವಾರ ಬೆಳಗ್ಗೆ 9 ಗಂಟೆ ವೇಳೆಗೆ ವಾಯು ಗುಣಮಟ್ಟ ಸೂಚ್ಯಂಕವು (AQI) 437 ರಷ್ಟು ದಾಖಲಾಗಿದೆ. ಆರೋಗ್ಯದ ದೃಷ್ಟಿಯಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ನವೆಂಬರ್ 10ರ ವರೆಗೆ ಮುಚ್ಚುವಂತೆ ದೆಹಲಿ ಸರ್ಕಾರ ಆದೇಶಿಸಿದೆ. ಈ ನಡುವೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದೇ ಉನ್ನತ ಮಟ್ಟದ ಸಭೆ ಕರೆದ್ದಾರೆ.
ಸಭೆಯಲ್ಲಿ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಸೇರಿದಂತೆ ಸಾರಿಗೆ, ಮುನ್ಸಿಪಲ್ ಕಾರ್ಪೊರೇಷನ್, ದೆಹಲಿ ಪೊಲೀಸ್, ದೆಹಲಿ ಟ್ರಾಫಿಕ್ ಪೋಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಸಭೆಯಲ್ಲಿ ನಗರದಾದ್ಯಂತ ಕೈಗೊಳ್ಳಬಹುದಾದ ಹೆಚ್ಚುವರಿ ತುರ್ತು ಕ್ರಮಗಳ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ.
ದೆಹಲಿಯಲ್ಲಿ AQI 450 ಮಾರ್ಕ್ ಅನ್ನು ಮೀರುವ ಕನಿಷ್ಠ ಮೂರು ದಿನಗಳ ಮೊದಲು ಮಾಲಿನ್ಯ-ವಿರೋಧಿ ಯೋಜನೆಯ ಅಂತಿಮ ಹಂತವನ್ನು ಸಕ್ರಿಯಗೊಳಿಸಲಾಗುತ್ತದೆ. ಆದರೆ, ಈ ಬಾರಿ ಕ್ರಿಯಾಶೀಲ ಅನುಷ್ಠಾನ ಸಾಧ್ಯವಾಗಿಲ್ಲ. ಇದರಿಂದ ವಾಯು ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೇದಾರನಾಥದಲ್ಲಿ ಕಾಯುತ್ತಿರುವ ಯಾತ್ರಾರ್ಥಿಗಳಿಗೆ ಚಹಾ ಹಂಚಿದ ರಾಗಾ
ಸೋಮವಾರ ಬೆಳಗ್ಗೆ 9 ಗಂಟೆಗೆ ಬವಾನಾದಲ್ಲಿ 478, ದ್ವಾರಕಾ ಸೆಕ್ಟರ್ 8ರಲ್ಲಿ 459, ಜಹಾಂಗೀರಪುರಿಯಲ್ಲಿ 475, ಮುಂಡ್ಕಾದಲ್ಲಿ 466, ನರೇಲಾದಲ್ಲಿ 460, ನ್ಯೂ ಮೋತಿ ಬಾಗ್‌ನಲ್ಲಿ 444, ಓಖ್ಲಾ ಹಂತ-2ರಲ್ಲಿ 446 ರಷ್ಟು ವಾಯುಗುಣಮಟ್ಟ ಸೂಚ್ಯಂಕ ದಾಖಲಾಗಿದೆ. ಪಂಜಾಬಿ ಬಾಗ್‌ನಲ್ಲಿ 469, ಆರ್‌ಕೆ ಪುರಂನಲ್ಲಿ 462, ರೋಹಿಣಿಯಲ್ಲಿ 478, ಸಿರಿ ಫೋರ್ಟ್‌ನಲ್ಲಿ 430 ಮತ್ತು ವಜೀರ್‌ಪುರದಲ್ಲಿ 482 ರಷ್ಟು ದಾಖಲಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ನ.19ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ – ಖಲಿಸ್ತಾನಿ ಭಯೋತ್ಪಾದಕನ ಬೆದರಿಕೆ ವೀಡಿಯೋ
ಈಗಾಗಲೇ ವಾಯು ಮಾಲಿನ್ಯಕ್ಕೆ ನಿಖರ ಕಾರಣ ಪತ್ತೆಹಚ್ಚಲು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ 1,119 ಅಧಿಕಾರಿಗಳನ್ನೊಳಗೊಂಡ 517 ತಂಡಗಳನ್ನ ರಚಿಸಿದೆ. ಈ ತಂಡದ ಮೂಲಕ ಚಳಿಗಾಲದ ಕ್ರಿಯಾಯೋಜನೆ ಅಡಿಯಲ್ಲಿ ತೆರೆದ ಪ್ರದೇಶದಲ್ಲಿ ವಸ್ತುಗಳ ಸುಡುವಿಕೆ, ಅನಗತ್ಯ ತ್ಯಾಜ್ಯ ಮತ್ತು ಇತರೇ ಕಾರಣಗಳಿಂದ ಉಂಟಾಗುತ್ತಿರುವ ಧೂಳನ್ನು ಪರಿಶೀಲಿಸಲು ಈ ತಂಡವನ್ನು ನಿಯೋಜಿಸಿದೆ. ಈ ನಡುವೆ ಉನ್ನತ ಮಟ್ಟದ ಸಭೆಯಲ್ಲಿ ಇನ್ನಷ್ಟು ತುರ್ತು ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಮ್ಮ ಕ್ರಿಕೆಟ್ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ: ಭಾರತದ ಗೆಲುವಿಗೆ ಮೋದಿ ಅಭಿನಂದನೆ